ತುಮಕೂರು
ಕನ್ನಡ ಭಾಷೆಯನ್ನು ನಾವೆಲ್ಲರೂ ಬಳಸುವ ಮೂಲಕ ಬೆಳೆಸೋಣ ಎಂದು ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲೆ ಸಿ.ಆರ್.ಭಾಗ್ಯಮ್ಮ ಕರೆ ನೀಡಿದರು.
ಕಾರಾಗೃಹದಲ್ಲಿ 67ನೇ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕಾರಾಗೃಹ ಬಂದಿಗಳಿಗಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಖಂಡ ಕರ್ನಾಟಕ ಬೆಳೆದು ಬಂದ ರೀತಿ, ಕನ್ನಡ ನಾಡು-ನುಡಿ ಬಗ್ಗೆ ಸವಿಸ್ತಾರವಾಗಿ ವಿವರಿಸಿದರು.
ಕಾರಾಗೃಹದ ಅಧೀಕ್ಷಕಿ ಎಂ. ಶಾಂತಮ್ಮ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ದೈನಂದಿನ ಜೀವನದಲ್ಲಿ ನಮಗರಿವಿಲ್ಲದೆ ಪರಿಕೀಯ ಭಾಷೆಯನ್ನು ಬಳಸಿ ನಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದೇವೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನೇ ಮಾತನಾಡುವುದನ್ನು ನಾವೆಲ್ಲ ರೂಢಿಸಿಕೊಳ್ಳಬೇಕು. ಇತರರಿಗೂ ಕನ್ನಡದ ಹಿರಿಮೆಯ ಬಗ್ಗೆ ತಿಳಿಸಬೇಕು ಎಂದು ತಿಳಿಸಿದರು.
ಜಿಲ್ಲಾ ವಕೀಲರ ಸಂಘದ ಹಿರಿಯ ವಕೀಲ ಡಿ. ರಾಮಕೃಷ್ಣ ಮಾತನಾಡಿ, ಕನ್ನಡ ನಾಡಿನ ಅಭಿವೃದ್ದಿಗಾಗಿ ಹಲವಾರು ಕವಿಗಳು, ಸಾಹಿತಿಗಳು ಹೋರಾಟ ಮಾಡಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯವೆಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಾರಾಗೃಹದ ಸಹಶಿಕ್ಷಕ ಸಿದ್ಧರಾಜಯ್ಯ ಮಾತನಾಡಿ, ಕನ್ನಡಿಗರೆಲ್ಲರೂ ಕನ್ನಡ ನಾಡನ್ನು ಕಟ್ಟುವ, ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗೋಪಿನಾಥ್ ಡಿ., ಪಿ.ವಿ. ಕೋಪರ್ಡೆ, ಜೈಲರ್ ಬಿ.ವೈ. ಬಿಜ್ಜೂರ, ಸಹಾಯಕ ಜೈಲರ್‍ಗಳಾದ ಎಂ.ಎಸ್. ರಾಮಚಂದ್ರ, ಶಿವರಾಜು ಟಿ. ಉಪಸ್ಥಿತರಿದ್ದರು.