ತುಮಕೂರು


ಮತದಾನ ಪ್ರಕ್ರಿಯೆಯಲ್ಲಿ ಯುವ ಸಮೂಹದ ಪಾತ್ರ ಅಪಾರವಾದುದು ಎಂದು ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಕೆ.ವಿದ್ಯಾಕುಮಾರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಕಾಲೇಜಿನ ವಿಶ್ವ ಮಾನವ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕ್ಲಬ್ನ ಸದಸ್ಯರುಗಳು ಹಾಗೂ ಕ್ಯಾಂಪಸ್ ಅಂಬಾಸಿಡರ್ ಗಳಿಗೆ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಕುರಿತು ಗುರುವಾರ ಪ್ರಕಟವಾಗಲಿರುವ ಮತದಾರರ ಪಟ್ಟಿ ಕುರಿತ ಜಾಗೃತಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
18 ವರ್ಷ ಪೂರೈಸಿದ ಪ್ರತಿಯೊಬ್ಬ ಪ್ರಜೆಯೂ ತಪ್ಪದೇ ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಿಕೊಳ್ಳಲು ಹಾಗೂ ಮರಣಹೊಂದಿದ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲು ಪ್ರತಿಯೊಬ್ಬರೂ ಶ್ರಮ ವಹಿಸಬೇಕಿದೆ ಎಂದು ಡಾ. ಕೆ.ವಿದ್ಯಾಕುಮಾರಿ ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಟಿ.ಆರ್.ಲೀಲಾವತಿ ರವರು, ವಿದ್ಯಾರ್ಥಿಗಳು ಮತದಾನದ ಜವಾಬ್ದಾರಿಯನ್ನು ಅರಿತು ಅದರ ಮಹತ್ವವನ್ನು ಎಲ್ಲರಿಗೂ ಸಾರಬೇಕಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ವಿಧಾನ ಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಮತದಾನ ಮಾಡುವ ಗುರುತರವಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಹಾಗಾಗಿ ಗ್ರಾಮೀಣ ಮಕ್ಕಳಿಗೆ ಮತದಾನದ ಬಗ್ಗೆ ಹೆಚ್ಚಿನ ಅರಿವು ಅಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸಂಚಾಲಕರಾದ ಮಂಜುನಾಥ್ ರವರು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಸಹಾಯಕ ನೋಡಲ್ ಅಧಿಕಾರಿಗಳಾದ ಜಿ.ಆರ್.ಶ್ರೀನಿವಾಸ್, ಎಲ್.ಎ.ಎಸ್. ಸಂಚಾಲಕರಾದ ಅನಿತಲಕ್ಷ್ಮೀ, ಉಪನ್ಯಾಸಕರಾದ ಮಹೇಶ್, ಸಿದ್ದನಾಯಕ್, ಡಾ. ಅಶ್ವಕ್ ಅಹಮದ್, ತಾಲ್ಲೂಕು ಐ.ಇ.ಸಿ. ಸಂಯೋಜಕರಾದ ಟಿ.ಕೆ.ವಿನುತ್ ಹಾಜರಿದ್ದರು.

(Visited 18 times, 1 visits today)