ತುಮಕೂರು
ಕನ್ನಡ ನಾಡಿಗೆ ಕನ್ನಡವೇ ಬೇಕು ಎಂದು ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷರಾದ ಪ್ರೊ. ಕೆ.ಎಸ್ ಸಿದ್ಧಲಿಂಗಪ್ಪನವರು ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ದಾರ್ಥ ಪ್ರಥಮ ದರ್ಜೆ ಕಾಲೇಜು, ಐಕ್ಯೂಎಸಿ ವಿಭಾಗ ಮತ್ತು ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಕ್ಷಣ ಶಿಲ್ಪಿ ಡಾ.ಎಚ್.ಎಂ.ಗಂಗಾಧರಯ್ಯ ಸ್ಮಾರಕ ಉಪನ್ಯಾಸ ಮಾಲಿಕೆ-7ರಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ನಾಡು ನುಡಿ ವಿಚಾರಗಳು ಉಪನ್ಯಾಸ ಮಾಲಿಕೆಯನ್ನು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸುಮಾರು 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯು ಕಾಲಾಂತರ ಬದಲಾಗುತ್ತ ಬಂದಿದೆ. ಇಂದಿನ ದಿನಗಳಲ್ಲಿ ಭಾಷೆಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ವೈಜ್ಞಾನಿಕ ತಳಹದಿ ಇರುವ ಕನ್ನಡ ಭಾಷೆಯನ್ನು ಜನರು ಪ್ರಯೋಗಾತ್ಮಕವಾಗಿ ಬಳಸಬೇಕು. ವಿಷಯ ಅರ್ಥವಾಗುವಂತೆ ಹಾಗೂ ಭಾವನೆಗಳನ್ನು ವ್ಯಕ್ತಪಡಿಸುವ ಸಂವಹನ ಮಾಧ್ಯಮವೇ ಭಾಷೆ. ಈ ಭಾಷೆಗೆ ತನ್ನದೇ ಆದ ಮಹತ್ವವಿದೆ ಎಂದು ತಿಳಿಸಿದರು.
ಪ್ರಾಂಶುಪಾಲರಾದ ಡಾ.ವಿಜಯ ಭಾಸ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಾಷೆ ಎನ್ನುವುದು ಕೇವಲ ಸಂವಹನ ಮಾಧ್ಯಮವಲ್ಲ ಇದು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ರೂಪ. ನಾವು ನಮ್ಮ ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಬೇಕು. ಜೊತೆಗೆ ಅನ್ಯ ಭಾಷೆಯನ್ನು ಅಷ್ಟೇ ಗೌರವದಿಂದ ಕಾಣಬೇಕು. ಭಾಷೆ ಮೇಲೆ ಇರುವ ಪ್ರೀತಿ ಸಂಬಂಧ ಬೆಳೆಸಬೇಕು ವಿನಃ ದ್ವೇಶ ಹುಟ್ಟಿಸುವ ರೀತಿಯಲ್ಲಿ ಇರಬಾರದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ರಮೇಶ್ ಮಣ್ಣೆ ಪ್ರಾಸ್ತಾವಿಕ ನುಡಿದರು. ಐಕ್ಯೂಐಸಿ ಸಂಚಾಲಕರಾದ ಸೈಯದ್ ಬಾಬು, ಬೋದಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.