ತುಮಕೂರು


ಅತ್ಯಂತ ಹಿಂದುಳಿದಿರುವ ನೇಕಾರರ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ,ಅವರಿಗೆ ಸರಕಾರದ ಸವಲತ್ತುಗಳು ದೊರೆಯುವಂತೆ ಮಾಡುವ ಉದ್ದೇಶದಿಂದ ಎಲ್ಲಾ ನೇಕಾರರ ಸಮುದಾಯಗಳನ್ನು ಒಂದು ಸೂರಿನಡಿ ತರುವ ಉದ್ದೇಶದಿಂದ ನವೆಂಬರ್ 13ರಂದು ತುಮಕೂರು ಜಿಲ್ಲಾ ನೇಕಾರರ ಒಕ್ಕೂಟದಿಂದ ನೇಕಾರರ ಸಮಾವೇಶ ಹಾಗೂ ಪ್ರತಿಭಾಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ಜಿಲ್ಲೆಯಲ್ಲಿ ಸುಮಾರು 60 ಸಾವಿರ ಜನರ ಸಂಖ್ಯೆಯನ್ನು ಹೊಂದಿರುವ, ರಾಜ್ಯದಲ್ಲಿ ಸುಮಾರು 45-50 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ನೇಕಾರರ ಸಮುದಾಯಗಳು ಅರ್ಥಿಕವಾಗಿ, ಸಾಮಾಜಿಕವಾಗಿ,ಶೈಕ್ಷಣಿಕವಾಗಿ,ರಾಜಕೀಯವಾಗಿ ಸಾಕಷ್ಟು ಹಿಂದುಳಿದಿವೆ.ರಾಜಕೀಯ ಸ್ಥಾನಮಾನವೆಂಬುದು ಮರೀಚಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ 2023ರ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಕನಿಷ್ಠ 5 ಕ್ಷೇತ್ರಗಳಲ್ಲಿ ಈ ಸಮುದಾಯ ಗಳಿಗೆ ಎಲಾ ರಾಜಕೀಯ ಪಕ್ಷಗಳು ಟಿಕೇಟ್ ನೀಡಿ ಸ್ಪರ್ಧೆಗೆ ಅವಕಾಶ ಕಲ್ಪಿಸಬೇಕು.ಹಾಗೆಯೇ ಶಿಕ್ಷಣದಲ್ಲಿ ಸಮುದಾಯದ ಅಭಿವೃದ್ದಿಗೆ ಹೆಚ್ಚಿನ ಹಾಸ್ಟಲ್ ತೆರೆದು ಅವಕಾಶ ಕಲ್ಪಿಸಬೇಕೆಂಬುದು ನಮ್ಮ ಆಶಯವಾಗಿದೆ. ಈ ನಿಟ್ಟಿನಲ್ಲಿ ಸರಕಾರದ ಮೇಲೆ ಒತ್ತಡ ತರಲು ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಎಸ್.ಸೋಮಶೇಖರ್ ಮಾತನಾಡಿ,ಕಳೆದ 11 ವರ್ಷಗಳಿಂದ ನೇಕಾರರ ಸಮುದಾಯವನ್ನು ಒಗ್ಗೂಡಿಸಲು ಹಲವಾರು ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸುಮಾರು 29 ಒಳಪಂಗಡಗಳಲ್ಲಿ ಹಂಚಿ ಹೋಗಿರುವ ನೇಕಾರರು,ಕರ್ನಾಟಕದಲ್ಲಿ ಪ್ರವರ್ಗ 1 ಎ ಗೆ ಸೇರಿದ್ದು,ರಾಜಕೀಯ ಪ್ರಾತಿನಿಧ್ಯವಿಲ್ಲ. ಮುಂಬರುವ ಚುನಾವಣೆಯಲ್ಲಿ ನಮ್ಮವರಿಗೆ ಟಿಕೇಟ್ ನೀಡಬೇಕು.ಹಾಗೆಯೇ ನೇಕಾರರ ಅಭಿವೃದ್ದಿಗೆ ನೇಕಾರ ಸಮುದಾಯಗಳ ಅಭಿವೃದ್ದಿ ನಿಗಮ ಸ್ಥಾಪಿಸಬೇಕೆಂಬುದು ನಮ್ಮ ಆಗ್ರಹವಾಗಿದೆ.ಅಲ್ಲದೆ ಬೆಂಗಳೂರಿನ ನೇಕಾರರ ಭವನ ನಿರ್ಮಾಣಕ್ಕೆ ಸಹಕಾರ ನೀಡಬೇಕೆಂಬುದು ಸರಕಾರದ ಮುಂದಿರುವ ಬೇಡಿಕೆಗಳಾಗಿವೆ ಎಂದರು.
ಇದೇ ಮೊದಲ ಬಾರಿಗೆ ನಮ್ಮ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ ಏರ್ಪಡಿಸಲಾಗಿದೆ.ಸುಮಾರು 250ಕ್ಕೂ ಮಕ್ಕಳನ್ನು ಗೌರವಿಸಲಾಗುವುದು, ಇತರೆ ಸಮುದಾಯದ ರೀತಿ ನಮ್ಮ ಮಕ್ಕಳು ಶಿಕ್ಷಣದಲ್ಲಿ ಮುಂದೆ ಬರಬೇಕೆಂಬುದು ಈ ಪ್ರತಿಭಾಪುರಸ್ಕಾರದ ಉದ್ದೇಶವಾಗಿದೆ ಎಂದು ಸೋಮಶೇಖರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನೇಕಾರರ ಸಮುದಾಯಗಳ ಒಕ್ಕೂಟದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ಮುರುಳಿಕೃಷ್ಣ, ತುಮಕೂರು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಉಪಾಧ್ಯಕ್ಷರಾದ ಎನ್.ವೆಂಕಟೇಶ್,ಕರಿಯಪ್ಪ, ಕಾರ್ಯದರ್ಶಿ
ಆರ್.ರಾಮಕೃಷ್ಣಯ್ಯ,ಸಹಕಾರ್ಯದರ್ಶಿ ಯೋಗಾನಂದ್,ಸಂಘಟನಾಕಾರ್ಯದರ್ಶಿ ಆರ್.ಅನಿಲ್‍ಕುಮಾರ್ ಸೇರಿದಂತೆ
ಹಲವರು ಉಪಸ್ಥಿತರಿದ್ದರು.

 

(Visited 1 times, 1 visits today)