ತುಮಕೂರು

ಕೇಂದ್ರ ಸರಕಾರಿ ಸೇವೆಯಲ್ಲಿ ಐಎಎಸ್, ಐಪಿಎಸ್, ಐಎಫ್‍ಎಸ್ ಮಾತ್ರವಲ್ಲ, ಸೇನೆ, ಆರ್ಥಿಕ ಸಚಿವಾಲಯ, ಆಹಾರ ಪರಿಸರ, ನಗರಾಭಿವೃದ್ಧಿ ಸೇರಿದಂತೆ ವಿವಿಧ ಮಂತ್ರಾಲಯಗಳಲ್ಲಿ ಗ್ರೂಪ್‍ಬಿ ಹುದ್ದೆಗಳು ಸೇರಿದಂತೆ ಅನೇಕ ಹುದ್ದೆಗಳನ್ನು ಸ್ಟಾಫ್ ಸೆಲೆಕ್ಷನ್ ಕಮೀಷನ್ ಹಾಗೂ ಇತರೆ ನೇಮಕಾತಿ ಪ್ರಾಧಿಕಾರದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ. ಆ ಹುದ್ದೆಗಳಿಗೂ ಅರ್ಜಿಹಾಕಿ ನೇಮಕ ಪರೀಕ್ಷೆ ಎದುರಿಸಿ ಎಂದು ನೀತಿ ಆಯೋಗದ ಉಪ ಸಲಹೆಗಾರ ಡಾ.ಮುನಿರಾಜು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.
ಕನಕ ಶ್ರೀ ಸೇವಾ ಸಮಿತಿಯಿಂದ ನಗರದ ಶ್ರೀದೇವಿ ಛಾರಿಟಬಲ್ ಟ್ರಸ್ಟ್, ಇನ್‍ಸೈಟ್ ಐಎಎಸ್ ಅಕಾಡೆಮಿ ಸಹಕಾರದೊಂದಿಗೆ ಶ್ರೀದೇವಿ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ದಾಸಶ್ರೇಷ್ಠ ಕನಕ ಜಯಂತಿ ಅಂಗವಾಗಿ ಏರ್ಪಡಿಸಿರುವ ‘ಎಜುಕಾನ್-2022’ ಹೆಸರಿನ 5 ದಿನಗಳ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕಾರ್ಯಾಗಾರದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಇಂದು ಹುದ್ದೆಗಳ ನೇಮಕಾತಿಯಲ್ಲಿ ತೀವ್ರ ಸ್ಪರ್ಧೆಇದೆ. ಸ್ಪರ್ಧಾತ್ಮಕ ಪರೀಕ್ಷೆ, ಸಂದರ್ಶನಗಳು ಕಠಿಣವಾಗಿದ್ದು, ಒಂದೇ ಪ್ರಯತ್ನಕ್ಕೆ ಎಲ್ಲರೂ ಯಶಸ್ಸುಗಳಿಸಲು ಸಾಧ್ಯವಿಲ್ಲ. ಉನ್ನತ ಸ್ಥಾನ ಪಡೆಯಲು ನಿರಂತರ ಶ್ರಮ ಪ್ರಯತ್ನ ಅತ್ಯಾವಶ್ಯಕವಾಗಿದೆ. ಈ ದಿಸೆಯಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಣಿಗೊಳಿಸಲು ಕನಕಶ್ರೀ ಸೇವಾ ಸಮಿತಿಯವರು ಇನ್‍ಸೈಟ್ ಅಕಾಡೆಮಿ, ಶ್ರೀದೇವಿ ಸಂಸ್ಥೆ ಸೇರಿ ಕಾರ್ಯಗಾರವನ್ನು ಆಯೋಜಿಸಿರುವುದು ಸ್ವಾಗತಾರ್ಹ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಆಡಳಿತ ಸೇವೆಯಲ್ಲಿ ಯಾವುದೇ ಬ್ಯಾಂಕ್ ಗ್ರೌಂಡ್ ಇಲ್ಲದ ಅಧಿಕಾರಿಗಳು ಬಂದು ಉತ್ತಮ ಹೆಸರು ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಉತ್ತಮ ಹುದ್ದೆ ಪಡೆಯಲೇಬೇಕೆಂದು ಮಾಡಿದ ಪ್ರಯತ್ನ, ಛಲ ಕಾರಣ. ಕನಕ ಶ್ರೀ ಸೇವಾ ಸಮಿತಿಯವರು ಈ ನಿಟ್ಟಿನಲ್ಲಿ ಸಮುದಾಯದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಮಾರ್ಗದರ್ಶಿ ವೇದಿಕೆಯನ್ನು ಎಜುಕಾನ್ ಕಾರ್ಯಾಗಾರದ ಮೂಲಕ ಕಲ್ಪಿಸಿಕೊಟ್ಟಿದ್ದಾರೆ ಎಂದರು.
ಇನ್‍ಸೈಟ್ ಐಎಎಸ್ ಮುಖ್ಯಸ್ಥ ಜಿ.ಬಿ.ವಿನಯ್‍ಕುಮಾರ್ ಮಾತನಾಡಿ ಪ್ರಸ್ತುತ ತರಬೇತಿ ಕಾರ್ಯಾಗಾರಕ್ಕೆ ರಾಜ್ಯದ 26 ಜಿಲ್ಲೆಗಳಿಂದ ಅಭ್ಯರ್ಥಿಗಳು ಬಂದಿದ್ದು, ಬಹುಪಾಲು ಮಂದಿ ತಮ್ಮ ತಲೆಮಾರಿನಲ್ಲೆ ಮೊದಲ ಬಾರಿಗೆ ಪದವಿ ಪಡೆದವರಾಗಿದ್ದು, ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನಹರಿಸುತ್ತಿದ್ದಾರೆ. ಅವಕಾಶಗಳು ಲಭ್ಯವಾಗಬೇಕಾದರೆ ಸೂಕ್ತ ಮಾರ್ಗದರ್ಶನದೊಂದಿಗೆ ಕಠಿಣ ಸ್ಪರ್ಧೆ ನೀಡುವ ವೇಗದ ಚಾಕಚಕ್ಯತೆಯನ್ನು ಬೆಳೆಸಿಕೊಳ್ಳಬೇಕಿದೆ ಎಂದರು.
ಸಾಧನೆಯೆಡೆಗೆ ಗುರಿಯಿರಲಿ: ಶ್ರೀದೇವಿ ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ.ರಮಣ್ ಹುಲಿನಾಯ್ಕರ್ ಮಾತನಾಡಿ ವಿದ್ಯಾರ್ಥಿಗಳ ಗುರಿ ಸಾಧನೆಯೆಡೆಗೆ ನಿಶ್ಚಿತವಾಗಿರಬೇಕು. ಶಿಕ್ಷಣ ಸಮಗ್ರ ಅಭಿವೃದ್ಧಿಗೆ ಬುನಾದಿ. ಶಿಕ್ಷಣ. ಆರ್ಥಿಕ ಪ್ರಗತಿ, ಧಾರ್ಮಿಕತೆಯ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು. ಆದರೆ ರಾಜಕೀಯದ ಬಗ್ಗೆ ಹೆಚ್ಚಿನ ಜನ ಆಸಕ್ತಿ ತಾಳಿ, ಅದರ ಬಗ್ಗೆಯೇ ಹೆಚ್ಚು ಮಾತನಾಡುತ್ತಾ ಅಮೂಲ್ಯ ಸಮಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಬಡ ಪ್ರತಿಭಾವಂತ ಮಕ್ಕಳು ಒಳ್ಳೆಯ ಭವಿಷ್ಯ ಕಟ್ಟುಕೊಳ್ಳಲು ಪೂರಕವಾಗುವಂತೆ ಕನಕಶ್ರೀ ಸೇವಾ ಸಮಿತಿಯ ಟಿ.ಎನ್ ಮಧುಕರ್ ಹಾಗೂ ಪದಾಧಿಕಾರಿಗಳು ಮುಂದಾಗಿ ಕಳೆದ ವರ್ಷದಿಂದ ಕಾರ್ಯಾಗಾರ ಆಯೋಜಿಸುತ್ತಾ ಬಂದಿದ್ದಾರೆ. ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಬೇಕೆಂದರು. ಪ್ರಜಾಪ್ರಗತಿ ಸಂಪಾದಕ ಹಾಗೂ ಕಾರ್ಯಾಗಾರದ ರೂವಾರಿ ಟಿ.ಎನ್.ಮಧುಕರ್ ಅವರು ಸ್ವಾಗತಿಸಿ ಕನಕಶ್ರೀಸೇವಾ ಸಮಿತಿ ಸ್ಥಾಪನೆ ಉದ್ದೇಶ, ಸೇವಾ ಚಟುವಟಿಕೆಗಳನ್ನು ವಿವರಿಸಿದರು.
ಪ್ರಜಾಪ್ರಗತಿ ಸಂಪಾದಕ ಎಸ್.ನಾಗಣ್ಣ ಅವರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕಾರ್ಯಾಗಾರದ ಸಂಚಾಲಕ ಡಾ.ಕೆ.ಜಿ.ಪರಶುರಾಮ್ ಪ್ರಾಸ್ತಾವಿಕ ನುಡಿಗಳನ್ನಾಡಿದರೆ, ಮತ್ತೋರ್ವ ಸಂಚಾಲಕ ಯೋಗೀಶ್ ಅವರು ಕಾರ್ಯಗಾರದ ಸ್ವರೂಪವನ್ನು ವಿವರಿಸಿದರು. ಸಂಚಾಲಕ ನಿವೃತ್ತ ಸೈನಿಕ ರೇಣುಕಾಪ್ರಸಾದ್ ವಂದಿಸಿದರು. ಅನುಪಮಾ ಕಾರ್ಯಕ್ರಮ ನಿರೂಪಿಸಿದರು. ಇನ್‍ಸೈಟ್ ಐಐಎಸ್‍ನ ಶಶಾಂಕ್, ಹೋಂಗಾರ್ಡ್ ಕಮಾಂಡೆಂಟ್ ಪಾತಣ್ಣ ನೀಲಗಂಗಾ ಪ್ಯಾರಾ ಮೆಡಿಕಲ್‍ನ ಕಲ್ಲಪ್ಪ ಸೇರಿ ಹಲವರು ಹಾಜರಿದ್ದರು.

(Visited 2 times, 1 visits today)