ತುಮಕೂರು:
ಕರ್ನಾಟಕ ಪೊಲೀಸರ ಸೇವೆ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‍ಕುಮಾರ್ ಇಂದಿಲ್ಲಿ ಹೇಳಿದರು.
ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟಕ್ಕೆ ಪಾರಿವಾಳ ಮತ್ತು ಬಲೂನ್‍ಗಳನ್ನು ಹಾರಿ ಬಿಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಪೊಲೀಸ ರು ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡುವಲ್ಲಿ ಇತರೆ ರಾಜ್ಯಗಳ ಪೊಲೀಸರಿಗಿಂತ ಮುಂಚೂಣಿಯಲ್ಲಿದ್ದಾರೆ. ಹಾಗಾಗಿ ನಮ್ಮ ರಾಜ್ಯದ ಪೊಲೀಸರ ಸೇವೆ ಬೇರೆ ರಾಜ್ಯಗಳ ಪೊಲೀಸರಿಗೆ ಮಾದರಿಯಾಗಿದೆ ಎಂದು ಪುನರುಚ್ಚರಿಸಿದರು.
ವರ್ಷದ 365 ದಿನವೂ, ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸಾರ್ವಜನಿಕ ಬದುಕಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ರಾಜ್ಯದ ಪೊಲೀಸರು ದಕ್ಷತೆ, ನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದಾರೆ ಎಂದರು.
ರಾಜ್ಯದ ಆರೂವರೆ ಕೋಟಿ ಜನರನ್ನು ಕಾಪಾಡುವ ಹೊಣೆ ಬೆರಳೆಣಿಕೆಯಷ್ಟು ಪೊಲೀಸರ ಮೇಲಿದೆ. ಪೊಲೀಸ ರು ತಮ್ಮ ವೈಯಕ್ತಿಕ ಬದುಕನ್ನು ತ್ಯಾಗ ಮಾಡಿ ಸಾರ್ವಜನಿಕ ಜೀವನದಲ್ಲಿ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಾರೆ. ಅವರ ಮನೆಯಲ್ಲಿ ಹಬ್ಬಹರಿದಿನಗಳ ಆಚರಣೆಯನ್ನು ಬದಿಗಿಟ್ಟು ಸಾರ್ವಜನಿಕ ಸುರಕ್ಷತಾ ಕಾರ್ಯದಲ್ಲಿ ನಿರತರಾಗುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸದಾ ಒತ್ತದಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಮಾನಸಿಕ ಮತ್ತು ದೈಹಿಕ ಸದೃಢತೆ ಕಾಪಾಡಿಕೊಂಡು ಹೋಗುವುದು ಕಷ್ಟಕರ. ಹಾಗಾಗಿ ಇಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಮಾನಸಿಕ ಮತ್ತು ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬಹುದು ಎಂದರು.
ಪೊಲೀಸ್ ಇಲಾಖೆ ವತಿಯಿಂದ ಮೂರು ದಿನಗಳ ಕಾಲ ಆಯೋಜಿಸಿರುವ ಈ ಕ್ರೀಡಾಕೂಟದ ಸದಾವಕಾಶವನ್ನು ಎಲ್ಲ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಸದುಪಯೋಗಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಪೊಲೀಸರ ಸೇವೆ ಇತರೆ ಇಲಾಖೆಗಳಿಗೂ ಮಾದರಿಯಾಗಿದೆ. ದಿನದ 24 ಗಂಟೆಯೂ ಸಾರ್ವಜನಿಕರ ಸುರಕ್ಷತೆ ಬಗ್ಗೆಯೇ ಚಿಂತಿಸುವ ಪೊಲೀಸ್ ಅಧಿಕಾರಿಗಳ ಸೇವೆ ಶ್ಲಾಘನೀಯ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ದಿವ್ಯಾಗೋಪಿನಾಥ್, ಪೊಲೀಸ್ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬಹಳ ಒತ್ತಡದಿಂದಲೇ ಕಾರ್ಯನಿರ್ವಹಿಸಬೇಕಾಗಿದೆ. ಹೀಗಾಗಿ ಮಾನಸಿಕ ಮತ್ತು ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಈ ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ನಾಗರಾಜು ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.