ಬೆಂಗಳೂರು:
ಪ್ರಾಥಮಿಕ ಶಾಲಾ ಮಕ್ಕಳಿಗೆ ನೀಡುವಂತೆ ಅಂಗನವಾಡಿ ಮಕ್ಕಳಿಗೂ ಶಾಲಾ ಸಮವಸ್ತ್ರ ನೀಡುವ ಯೋಜನೆಗೆ ಮುಂದಿನ ಆಯವ್ಯಯದಲ್ಲಿ ಚಾಲನೆ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಡಾ.ಜಯಮಾಲಾ ತಿಳಿಸಿದರು.
ಗುರುವಾರ ವಿಧಾನ ಪರಿಷತ್‍ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವೀಣಾ ಅಚ್ಚಯ್ಯ ಪ್ರಶ್ನೆಗೆ ಉತ್ತರಿಸಿದ ಅವರು, ಅಂಗನವಾಡಿ ಮಕ್ಕಳಿಗೂ ಶಾಲಾ ಸಮವಸ್ತ್ರ ನೀಡುವ ಯೋಜನೆ ಆರಂಭಿಸುವ ಬಗ್ಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹೀಗಾಗಿ ಮುಂದಿನ ಆಯವ್ಯಯದಲ್ಲಿ ಚಾಲನೆ ನೀಡಲಾಗುವುದು. ಮಾತೃಪೂರ್ಣ ಯೋಜನೆಯಡಿ 7 ತಿಂಗಳ ಗರ್ಭಿಣಿ ಮಹಿಳೆ ಅಂಗನವಾಡಿಗೆ ಬರಲು ಕಷ್ಟವಾಗುವುದರಿಂದ ಕಿಟ್ ಅನ್ನು ಮನೆಗೆ ತಲುಪಿಸಲಾಗುವುದು ಎಂದರು.
ಈ ವೇಳೆ ವೀಣಾ ಅಚ್ಚಯ್ಯ ಮಾತನಾಡಿ, ಉದ್ಯೋಗ ಯೋಜನೆಯಡಿ 40ಕ್ಕೂ ಹೆಚ್ಚು ಮಹಿಳೆಯರು ಟೈಲರಿಂಗ್ ತರಬೇತಿ ಪಡೆದಿದ್ದು, ಅವರಿಗೆ ಶಾಲಾ ಮಕ್ಕಳ ಸಮವಸ್ತ್ರ ಹೊಲಿಯುವ ಸೌಲಭ್ಯ ಕಲ್ಪಿಸಬೇಕು. ಕೊಡಗಿನಲ್ಲಿ ಅತಿವೃಷ್ಟಿಯಿಂದ 6 ಗ್ರಾಮ ಪಂಚಾಯತ್‍ಗಳು, 35 ಗ್ರಾಮಗಳು ನೆರೆಗೆ ತುತ್ತಾಗಿದ್ದು, ಈ ಗ್ರಾಮಗಳನ್ನು ವಿಶೇಷವಾಗಿ ಪರಿಗಣಿಸಿ ಎಪಿಎಲ್ ಕಾರ್ಡ್ ಹೊಂದಿದ ಕುಟುಂಬಕ್ಕೆ ಬಿಪಿಎಲ್ ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಡಾ.ಜಯಮಾಲಾ, ಈಗಾಗಲೇ ಕೊಡಗು ಅಭಿವೃದ್ಧಿಗೆ ರಾಜ್ಯ ಸರಕಾರ ವಿಶೇಷ ಗಮನ ಹರಿಸಿದ್ದು, ಕಿರುಸಾಲ, ಸಮೃದ್ಧಿ ಯೋಜನೆ ಸೇರಿ ಹಲವಾರು ಯೋಜನೆಗಳನ್ನು ಜಾರಿ ಮಾಡಲಾಗಿದ್ದು, ಇದರ ಜತೆಗೆ ಬಿಪಿಎಲ್ ಕಾರ್ಡ್ ನೀಡಲು ಚರ್ಚಿಸಲಾಗುವುದು ಎಂದರು.