ಗುಬ್ಬಿ


ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ತುಮಕೂರು ಜಿಲ್ಲೆಯ ಅಧಿಕಾರಿಗಳಿಂದ ಅಧಿಕ ವಿದ್ಯುತ್ ಕಂಬಗಳ ಕೆಳಗೆ ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬ ಅರಿವು ಮೂಡಿಸುವ ಕಾರ್ಯಕ್ರಮವನ್ನು ಗುಬ್ಬಿ ನಗರದ ಎಲ್ಲಾ ಬೀದಿಗಳಲ್ಲೂ ಜಾಥಾ ಮುಖಾಂತರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.
ವಿದ್ಯುತ್ ಪ್ರಸರಣ ನಿಗಮದ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಸೈಯದ್ ಅಂಜನ್ ಮಾತನಾಡಿ ಹೈಟೆನ್‍ಷನ್ ಹೋದ ಹಾದಿಯಲ್ಲಿ ಯಾವುದೇ ರೀತಿಯ ಕಟ್ಟಡಗಳು, ಶೆಡ್‍ಗಳನ್ನು ನಿರ್ಮಿಸಬಾರದು. ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅವಘಡಗಳು ನಡೆದಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಜಾಥಾವನ್ನು ಗುಬ್ಬಿ ಕೆ.ಪಿ.ಟಿ.ಎಲ್.ನ ಅಧಿಕಾರಿಗಳು ಹಾಗೂ ನಿರ್ವಾಹಕರೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಹಾಗೂ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಹೊಸದಾಗಿ ಲೇಔಟ್‍ಗಳನ್ನು ನಿರ್ಮಿಸುತ್ತಿದ್ದು ಹೈಟೆನ್‍ಷನ್ ಕೆಳಗಡೆ ಯಾವುದೇ ನಿವೇಶನವನ್ನು ಹಂಚಬಾರದು. ಈಗಾಗಲೇ ಇಂತಹ ಲೇಔಟ್‍ಗಳ ನಿರ್ಮಾಣದ ಮಾಲೀಕರಿಗೆ ಹಾಗೂ ಅಧಿಕಾರಿಗಳಿಗೆ ಕಛೇರಿಯಿಂದ ತಿಳುವಳಿಕೆ ನೋಟೀಸ್‍ನ್ನು ನೀಡಿದ್ದು ಇದನ್ನು ಸರಿಯಾದ ಹಾದಿಯಲ್ಲಿ ತಮ್ಮ ನಿರಾಪೇಕ್ಷಣಾ ಪತ್ರವನ್ನು ಮಾಲೀಕರಿಗೆ ನೀಡಬೇಕೆಂದು ತಿಳಿಸಿದರು.
ಕೆ.ಪಿ.ಟಿ.ಸಿ.ಎಲ್.ನ ಕಾರ್ಯನಿರ್ವಾಹಕ ಇಂಜಿನಿಯರ್ ಪುರುಷೋತ್ತಮ್ ಮಾತನಾಡಿ ಸಾಕಷ್ಟು ಬಾರಿ ಈ ಬಗ್ಗೆ ತಿಳುವಳಿಕೆ ನೀಡಿದ್ದರೂ ಕೆಲ ಪ್ರದೇಶಗಳಲ್ಲಿ ಮಕ್ಕಳು ಕಲಿಯುವಂತಹ ಶಾಲೆಗಳ ಮೇಲೆ ಹೈಟೆನ್ಷನ್ ತಂತಿಗಳು ಹರಿದಿದ್ದರೂ ಯಾವುದೇ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ಸುಮ್ಮನಿರುವುದು ಸರಿಯಲ್ಲ. ದುರ್ಘಟನೆ ನಡೆದಾಗ ಕೆ.ಪಿ.ಟಿ.ಸಿ.ಎಲ್.ನ ಅಧಿಕಾರಿಗಳನ್ನು ದೂರುವಂತಾಗಿರುವುದು ದುರಾದೃಷ್ಟಕರ. ಇನ್ನು ಮುಂದೆ ಯಾವುದೇ ಹೈಟೆನ್ಷನ್ ಆಜುಬಾಜಿನಲ್ಲಿ
ವಾಸಿಸುತ್ತಿರುವ ಮನೆಗಳ ಮಾಲೀಕರುಗಳು ಮಹಡಿಯ ಮೇಲೆ ಯಾವುದೇ ಕಬ್ಬಿಣದ ಅಥವಾ ಬಟ್ಟೆ ಒಣಗಿಸುವ ತಂತಿಗಳನ್ನು ಹಾಕದಂತೆ ತಿಳಿಸಿದರು.
ಜಾಥಾದಲ್ಲಿ ಎ.ಇ.ಇ. ಶಿವಮೂರ್ತಿ, ಎ.ಇ.ಇ. ಪ್ರಸರಣ -1ರ ಜಿ.ಎಸ್. ಶೈಲೇಂದ್ರ , ಜೆ.ಇ.ರವಿಕುಮಾರ್. ಟಿ.ಎಲ್.ಐ ತುಮಕೂರು ಗಿರೀಶ್ ಜೆ.ಇ.
ಕೆ.ಪಿ.ಟಿ.ಸಿ.ಎಲ್. ತುಮಕೂರು ಎಂ.ನಾಗರಾಜ ರಾವ್ ಹಾಗೂ ಪ್ರಸರಣ ನಿರ್ದೇಶಕರುಗಳು, ಲೈನ್‍ಮಾನ್‍ಗಳು ಭಾಗವಹಿಸಿದ್ದರು.

(Visited 1 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp