ತುಮಕೂರು
ಭಾರತದ ಜನರಿಗೆ ಕೋರೋನ ಇದ್ದ ಎರಡು ವರ್ಷ ಅತ್ಯಂತ ಸಂಕಷ್ಟದ ಕಾಲ.ಹಿಂದೆ ಅವರನ್ನು ಮುಟ್ಟಬೇಡಿ, ಇವರನ್ನು ಮುಟ್ಟಬೇಡಿ ಎಂದು ಹೇಳುತಿದ್ದರು. ಕೋರೋನದಿಂದಾಗಿ ನಮ್ಮನ್ನೇ ಮುಟ್ಟಬೇಡಿ ಎಂದು ಹೇಳುವಂತಹ ವಾತಾವರಣ ಸೃಷ್ಟಿಯಾಗಿದ್ದು ವಿಪರ್ಯಾಸ ಎಂದು ಹಿರೇಮಠಾಧ್ಯಕ್ಷ ಡಾ.ಶ್ರೀಶಿವಾನಂದಶಿವಾಚಾರ್ಯಸ್ವಾಮೀಜಿ ವಿಷಾದ ವ್ಯಕ್ತಪಡಿಸಿದ್ದಾರೆ.
ನಗರದ ಕುಣಿಗಲ್ ರಸ್ತೆಯ ಕೆ.ಎ.ಎಸ್ ರೈಸ್ ಮಿಲ್ ಆವರಣದಲ್ಲಿ ನಗರಪಾಲಿಕೆ 17ನೇ ವಾರ್ಡಿನ ಸದಸ್ಯ ಹೆಚ್.ಡಿ.ಕೆ.ಮಂಜುನಾಥ್ ಅವರ 38ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೆಂಗಳೂರಿನ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ,ಸ್ಪರ್ಷ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಪ್ರಕ್ರಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಅರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು,ಕೋರೋನದ ಎರಡು ವರ್ಷ ಮಾನವ ಕುಲಕ್ಕೆ ಒಂದು ಸವಾಲಿನ ಕಾಲವಾಗಿತ್ತು.ಮಾನವ ಎಷ್ಟೇ ಬುದ್ದಿವಂತನಾದರೂ,ಮಂಗಳ ಗ್ರಹಕ್ಕೆ ಹೋಗಿಬಂದಿದ್ದರೂ,ಒಂದು ವೈರಾಣು ಇಡೀ ಜಗತ್ತನ್ನು ಎರಡು ವರ್ಷಗಳ ಕಾಲ ಸ್ತಬ್ದಗೊಳಿಸಿತ್ತು ಎಂದರು.
ಕೋರೋನ ಸಂದರ್ಭದಲ್ಲಿ ಒಬ್ಬರಿಗೊಬ್ಬರು ಮುಟ್ಟಿಸಿಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿತ್ತು.ಇಂತಹ ಸಂದರ್ಭದಲ್ಲಿ ಹಲವಾರು ಜನಪ್ರತಿನಿಧಿಗಳು,ದಾನಿಗಳು, ಸಮಾಜ ಸೇವಕರು ಬಡವರಿಗೆ, ನಿರ್ಗತಿಕರಿಗೆ,ವಲಸೆ ಕಾರ್ಮಿಕರಿಗೆ,ದಾರಿ ಹೋಕರಿಗೆ ಅನ್ನ, ನೀರು ನೀಡುವ ಮೂಲಕ ಬಡವರಿಗೆ ನೆರವಾಗಿದ್ದಾರೆ. ಇಂತಹವರ ಸಂತತಿ ಹೆಚ್ಚಾಗಬೇಕು ಎಂದು ಹಿರೇಮಠದ ಡಾ.ಶ್ರೀಶಿವಾನಂದ ಶಿವಾಚಾರ್ಯಸ್ವಾಮೀಜಿ ಆಶಿಸಿದರು.
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಡಿ.ಕೆ. ಮಂಜುನಾಥ್ ಮಾತನಾಡಿ,ನನ್ನ ಕೆಲ ಗೆಳೆಯರ ಸಹಕಾರದೊಂದಿಗೆ ಇಂದು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗಿದೆ. ಕಣ್ಣಿನಪೊರೆ,ಹೃದ್ರೋಗ ತಪಾಸಣೆ ಮತ್ತು ಶಸ್ತ್ರಚಿಕಿಸೆ,ಮಂಡಿಚಿಪ್ಪು ಸವೆತ ಸೇರಿದಂತೆ ಸಾಮಾನ್ಯ ರೋಗಗಳ ತಪಾಸಣೆ ನಡೆಸಿ, ಅಗತ್ಯವಿರುವವರಿಗೆ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿ ನಡೆಸಿಕೊಡಲಾಗುವುದು.ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳ ಬೇಕೆಂದರು.
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಡಾ.ಮನುಪಾಟೀಲ್,ಜೆಡಿಎಸ್ ಮುಖಂಡ ಇಸ್ಮಾಯಿಲ್,ಪಾಲಿಕೆ ಆರೋಗ್ಯಾಧಿಕಾರಿ ಡಾ.ರಕ್ಷಿತ್ ಮತ್ತಿತರರು ಉಪಸ್ಥಿತರಿದ್ದರು.