ತುಮಕೂರು


ಜಿಲ್ಲೆಯಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯ 2023-24ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಉದ್ಯೋಗ ಖಾತ್ರಿ ನಡಿಗೆ ಸುಸ್ಥಿರತೆಯೆಡೆಗೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅಭಿಯಾನದ ಭಾಗವಾಗಿ ಜಲ ಸಂಜೀವಿನಿ ಕಾರ್ಯಕ್ರಮದ ಮಹತ್ವದ ಬಗ್ಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಪಕ ಪ್ರಚಾರ ಆಂದೋಲನ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ವಿದ್ಯಾಕುಮಾರಿ ತಿಳಿಸಿದ್ದಾರೆ.
ವೈಜ್ಞಾನಿಕ ಆಧಾರದ ಮೇಲೆ ಜಿಯೋ ಸ್ಪೇಷಿಯಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಕಾಮಗಾರಿಗಳನ್ನೊಳಗೊಂಡ ವಿವರವಾದ ವೈಜ್ಞಾನಿಕ ಯೋಜನಾ ವರದಿ ತಯಾರಿಸಿ, ಕಾಮಗಾರಿಗಳನ್ನು ಅನುಷ್ಟಾನಗೊಳಿಸಲಾಗುವುದು. ಈಗಾಗಲೇ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಜಲ ಸಂಜೀವಿನಿ ಕಾರ್ಯಕ್ರಮದ ಬಗ್ಗೆ ತರಬೇತಿ ನೀಡಲಾಗಿದ್ದು, ವೈಜ್ಞಾನಿಕ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀರಿನ ಆಯವ್ಯಯ ಮತ್ತು ಸಂಪನ್ಮೂಲ ನಕ್ಷೆಗಳಿಂದ ವಿವರವಾದ ಯೋಜನಾ ವರದಿ, ಜಿಐಎಸ್ ಆಧಾರಿತ ಜಲಾನಯನ ಪ್ರದೇಶದ ಅಭಿವೃದ್ಧಿಯಡಿ ಕಾಮಗಾರಿಗಳನ್ನು ಆಯ್ಕೆ ಮಾಡಿ, ಕಾಮಗಾರಿಗುಚ್ಚ ತಯಾರಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ದಿಬ್ಬದಿಂದ ಕಣಿವೆ ಪರಿಕಲ್ಪನೆಯಡಿ, ದೂರದೃಷ್ಟಿ ಯೋಜನೆಯಡಿ ಹಂತ ಹಂತವಾಗಿ ಅನುಷ್ಟಾನಗೊಳಿಸಲಾಗುವುದು. ಒಟ್ಟಾರೆ ಕ್ರಿಯಾಯೋಜನೆಯ ಒಟ್ಟು ಅಂದಾಜು ವೆಚ್ಚದಲ್ಲಿ ಕನಿಷ್ಟ ಶೇ.65ರಷ್ಟು ನೈಸರ್ಗಿಕ ಕಾಮಗಾರಿಗಳಿಗಾಗಿ ಮೀಸಲಿಡಲಾಗುವುದು ಎಂದು ಸಿಇಓ ಅವರು ತಿಳಿಸಿದ್ದಾರೆ.
ಕಳೆದ ತಿಂಗಳಿನಿಂದಲೇ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮನೆ ಮನೆಗೂ ಭೇಟಿ ನೀಡಿ, ಮನೆ ಮನೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು ರೈತರಿಗೆ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಅಲ್ಲದೆ ಸ್ಥಳೀಯರ ಸಹಭಾಗಿತ್ವದಲ್ಲಿ ಗ್ರಾಮೀಣ ವಿಶ್ಲೇಷಣೆ, ಕಾಲು ನಡಿಗೆ ಮತ್ತು ಸ್ಥಳ ಪರಿಶೀಲನೆ ಕಾರ್ಯವನ್ನು ನಿಗಧಿತ ಕಾಲಮಿತಿಯಲ್ಲಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕಾರ್ಮಿಕ ಆಯವ್ಯಯ ತಯಾರಿಕೆ ಸಲುವಾಗಿ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಡ್ರ್ಸಭೆ, ಗ್ರಾಮಸಭೆ, ಮಹಿಳಾ ವಿಶೇಷ ಗ್ರಾಮಸಭೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ನವೆಂಬರ್ ತಿಂಗಳ ಅಂತ್ಯದೊಳಗೆ ವಾರ್ಡ್ ಹಾಗೂ ಗ್ರಾಮಸಭೆಗಳನ್ನು ನಡೆಸಿ, ವಾರ್ಷಿಕ ಕ್ರಿಯಾಯೋಜನೆಗಳನ್ನು ಸಿದ್ದಪಡಿಸುವ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ. ಜನರ ಸಹಭಾಗಿತ್ವದಲ್ಲಿ ಕ್ರಿಯಾಯೋಜನೆಯನ್ನು ಹಾಗೂ ಕಾಮಗಾರಿಗಳ ಗುಚ್ಚವನ್ನು ಸಿದ್ದಪಡಿಸಬೇಕಾಗಿರುವುದರಿಂದ ವಾರ್ಡ್ ಸಭೆ ಮತ್ತು ಗ್ರಾಮಸಭೆಗಳಲ್ಲಿ ಸಾರ್ವಜನಿಕರು ಪಾಲ್ಗೊಂಡು ಕಾಮಗಾರಿ ಬೇಡಿಕೆ ಹಾಗೂ ಸೂಕ್ತ ಸಲಹೆ ಮತ್ತು ಮಾಹಿತಿಯನ್ನು ನೀಡಬೇಕಿದೆ. ಈ ರೀತಿ ಸಿದ್ದಪಡಿಸುವ ಕ್ರಿಯಾಯೋಜನೆಯ ಪ್ರಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಕಾಮಗಾರಿಗಳನ್ನು ಅನುಷ್ಟಾನಮಾಡಲಾಗುವುದು. ಆದ್ದರಿಂದ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಡಾ. ಕೆ.ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳ ಕೊನೆಯವಾರದೊಳಗೆ ಗ್ರಾಮ ಪಂಚಾಯಿತಿಗಳ ಡಿಪಿಆರ್ ಮತ್ತು ವಾರ್ಷಿಕ ಕ್ರಿಯಾಯೋಜನೆಯನ್ನು ಗ್ರಾಮ ಪಂಚಾಯಿತಿಗಳು ತಾಲ್ಲೂಕು ಪಂಚಾಯಿತಿಗೆ ಸಲ್ಲಿಸಬೇಕು. ಗ್ರಾಮ ಪಂಚಾಯಿತಿಗಳು ನೀಡಿದ ಕ್ರಿಯಾಯೋಜನೆಯನ್ನು ತಾಲ್ಲೂಕು ಪಂಚಾಯಿತಿಗಳು ಕ್ರೋಢೀಕರಿಸಿ, ಪರಿಶೀಲಿಸಿ ಜಿಲ್ಲಾ ಪಂಚಾಯಿತಿಗೆ ಸಲ್ಲಿಸಲು ಸೂಚಿಸಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸಲ್ಲಿಕೆಯಾದಂತಹ ಡಿಪಿಆರ್ ಗಳನ್ನು ಕ್ರೋಢೀಕರಿಸಿ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳು ಜನವರಿ ತಿಂಗಳ ಅಂತ್ಯಕ್ಕೆ ಜಿಲ್ಲಾ ವಾರ್ಷಿಕ ಯೋಜನೆ ಮತ್ತು ಕಾರ್ಮಿಕ ಆಯವ್ಯಯವನ್ನು ಜಿಲ್ಲಾ ಪಂಚಾಯಿತಿಯಲ್ಲಿ ಪರಿಶೀಲಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಿಇಓ ವಿದ್ಯಾಕುಮಾರಿ ಅವರು ತಿಳಿಸಿದ್ದಾರೆ.

(Visited 7 times, 1 visits today)