ತುಮಕೂರು


ನಗರದ ವಿವಿದೆಡೆಗಳಲ್ಲಿ ಇರುವ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ನಡೆಯುತ್ತಿರುವ ಹಾಸ್ಟಲ್ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲಿರುವ ಶಾಲಾ ಕಾಲೇಜುಗಳಿಗೆ ಬರಲು ತೀವ್ರ ತೊಂದರೆಯಾಗುತ್ತಿದ್ದು, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಾದಿಗ ದಂಡೋರ ರಾಜ್ಯ ವಕ್ತಾರ ಎಂ.ವಿ.ರಾಘವೇಂದ್ರಸ್ವಾಮಿ ಒತ್ತಾಯಿಸಿದ್ದಾರೆ.
ನಗರದ ಅಂಬೇಡ್ಕರ್ ಭವನದಲ್ಲಿ ಹಾಸ್ಟಲ್ ವಿದ್ಯಾರ್ಥಿಗಳು ಅನುಭವಿಸುತ್ತಿರುವ ನೋವುಗಳ ಬಗ್ಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು,ತುಮಕೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಬರುವ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಒದಗಿಸುವ ಉದ್ದೇಶದಿಂದ ನಗರದ ಹೊರವಲಯದಲ್ಲಿರುವ ಸಿ.ಎ.ಸೈಟ್‍ಗಳಲ್ಲಿ ಜಿಲ್ಲಾಡಳಿತ ಎಲ್ಲಾ ವರ್ಗದ ವಿದ್ಯಾರ್ಥಿಗಳ ಮೆಟ್ರಿಕ್‍ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟಲ್‍ಗಳನ್ನು ನಿರ್ಮಿಸಿ,ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಕಲ್ಪಸಿವೆ.ಆದರೆ ನಗರದ ಬಹುತೇಕ ಶಾಲಾ, ಕಾಲೇಜುಗಳು ನಗರದ ಒಳಭಾಗದಲ್ಲಿದ್ದು,ಐದಾರು ಕಿ.ಮಿ.ದೂರು ನಡೆದು ಬರಬೇಕಾಗಿದೆ.ಕೆಲವು ಕಡೆಗಳಲ್ಲಿ ಬಸ್ ಸೌಲಭ್ಯವಿದ್ದರೆ, ಮತ್ತೆ ಕೇಲವು ಕಡೆಗಳಲ್ಲಿ ಬಸ್ ಸೌಲಭ್ಯಗಳಿಲ್ಲ. ಇದು ವಿದ್ಯಾರ್ಥಿಗಳು ನಿಗಧಿತ ಸಮಯದಲ್ಲಿ ಶಾಲೆ,ಕಾಲೇಜುಗಳಿಗೆ ಹೋಗಿ ಪಾಠ, ಪ್ರವಚನ ನಡೆಸುವುದು ಕಷ್ಟವಾಗಿದೆ ಎಂದು ಎಂ.ವಿ.ರಾಘವೇಂದ್ರಸ್ವಾಮಿ ತಿಳಿಸಿದ್ದಾರೆ.
ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿ ನಾಗರಾಜು ಗೂಳರಿವೆ ಮಾತನಾಡಿ,ಗೆದ್ದಲ್ಲಹಳ್ಳಿ, ವೀರಸಾಗರ, ಬಟವಾಡಿ, ಎಸ್.ಐ.ಟಿ.,ಡಿ.ಎಂ.ಪಾಳ್ಯ,ಸತ್ಯಮಂಗಲ,ಕುಂದೂರು,ಗೋಕುಲ ಬಡಾವಣೆ ಹೀಗೆ ಹಲವು ಕಡೆಗಳಲ್ಲಿ ಹಾಸ್ಟಲ್‍ಗಳನ್ನು ನಿರ್ಮಿಸಿ, ಪ್ರವೇಶಾವಕಾಶ ಕಲ್ಪಿಸಲಾಗಿದೆ.ಆದರೆ ಡಿ.ಎಂ.ಪಾಳ್ಯ,ಸತ್ಯಮಂಗಲ, ಕುಂದೂರು, ಗೆದ್ದಲಹಳ್ಳಿ, ವೀರಸಾಗರ,ಗೋಕುಲ ಬಡಾವಣೆ ಗಳಿಂದ ನಗರಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲ.ಅಲ್ಲದೆ ಶಾಲಾ,ಕಾಲೇಜುಗಳಿಗೆ ಹಾಸ್ಟಲ್ ಗಳಿಂದ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಮಳೆ,ಗಾಳಿ ಬಂದರೆ ಆಶ್ರಯ ಪಡೆಯಲು ಸರಿಯಾದ ಬಸ್ ನಿಲ್ದಾಣ ಗಳಿಲ್ಲ.ದೂರದ ಹಾಸ್ಟಲ್‍ಗಳಿಂದ ಬರುವ ಹೆಣ್ಣು ಮಕ್ಕಳ ಪರಿಸ್ಥಿತಿ ಹೇಳತೀರದಾಗಿದೆ ಎಂದರು.
ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಹಾಸ್ಟಲ್ ಸೀಟು ಕೊಡಿಸಲು ತೋರುವ ಆಸಕ್ತಿಯನ್ನು ಜನಪ್ರತಿನಿಧಿಗಳು ಮಕ್ಕಳಿಗೆ ಅಗತ್ಯವಾಗಿರುವ ಸಾರಿಗೆ ವ್ಯವಸ್ಥೆ,ಸೂಕ್ತ ಬಸ್ ನಿಲ್ದಾಣ ನಿರ್ಮಿಸುವಲ್ಲಿ ತೋರುವುದಿಲ್ಲ.ಇದರ ಪರಿಣಾಮ ಬಡವರ ಮಕ್ಕಳು ಅತ್ಯಂತ ಕಡು ಕಷ್ಟದಲ್ಲಿ ಓದಬೇಕಾದ ಪರಿಸ್ಥಿತಿ ಇದೆ.ಹಾಗಾಗಿ ಮಕ್ಕಳಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಡಳಿತ ಮತ್ತು ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಡಿ.ಸಿ.ರಾಜಣ್ಣ ಮಾತನಾಡಿ,ಸರಕಾರದವತಿಯಿಂದ ನಡೆಯುತ್ತಿರುವ ಹಾಸ್ಟಲ್‍ಗಳಲ್ಲಿ ಕುರಿ ಮಂದೆ ತುಂಬಿದಂತೆ ವಿದ್ಯಾರ್ಥಿಗಳನ್ನು ತುಂಬುತಿದ್ದಾರೆ.ಮೂರು ಜನರು ವಾಸವಿರುವ ಕಡೆಗೆ 6-7 ಜನರನ್ನು ಕೂಡಿ,ಓದಲು, ಬರೆಯಲು ಆಗದಂತಹ ಸ್ಥಿತಿ,ಹಾಸಲು, ಹೊದಿಯಲು ಬೆಡ್‍ಶೀಟ್ ಇಲ್ಲ.ಬೆಳಗಿನ ಹೊತ್ತು ಶೌಚಾಲಯಕ್ಕೆ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ.ಶಿಕ್ಷಣ ಎಲ್ಲರಿಗೂ ಮುಖ್ಯ ಹಾಗಾಗಿ ಇಷ್ಟೇಲಾ ಸಮಸ್ಯೆಗಳಿದ್ದರೂ ವಿದ್ಯಾರ್ಥಿಗಳು ನೋವು ನುಂಗಿ ಕಲಿಯುತ್ತಿದ್ದಾರೆ.ಜಿಲ್ಲಾಡಳಿತ ಕೂಡಲೇ ಇತ್ತ ಕಡೆ ಗಮನಹರಿಸಿ,ಅಗತ್ಯ ಮೂಲ ಸೌಕರ್ಯದ ಜೊತೆಗೆ,ಮಕ್ಕಳು ಸರಾಗವಾಗಿ ಹೊರಪ್ರದೇಶಗಳಿಂದ ಶಾಲಾ ಕಾಲೇಜುಗಳಿಗೆ ಬರುವ ಮಕ್ಕಳಿಗೆ ಅಗತ್ಯ ಸಾರಿಗೆ ಸೌಲಭ್ಯದ ಜೊತೆಗೆ,ಅಲ್ಲಲ್ಲಿ ಸುರಕ್ಷಿತ ಬಸ್ ನಿಲ್ದಾಣಗಳನ್ನು ನಿರ್ಮಿಸಿ, ರಕ್ಷಣೆ ಒದಗಿಸಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಮಾಗೋಡು ಯೋಗಾನಂದ್,ತುಮಕೂರು ತಾಲೂಕು ಅಧ್ಯಕ್ಷರಾದ ಸುರೇಶ್ ಗುಲಗಂಜಿಹಳ್ಳಿ,ಪಾವಗಡ ರಾಮಾಂಜೀನಯ್ಯ,ಶಿರಾ ತಾಲೂಕು ಅಧ್ಯಕ್ಷರಾದ ಸತೀಶ್, ಮಧುಗಿರಿ ತಾಲೂಕು ಅಧ್ಯಕ್ಷ ರಂಗಸ್ವಾಮಯ್ಯ, ಜಿಲ್ಲಾ ಉಪಾಧ್ಯಕ್ಷ ದೊಡ್ಡೇರಿ ಮಹಾಲಿಂಗಯ್ಯ್ಯ,ಕೊರಟಗೆರೆ ತಾಲೂಕು ಅಧ್ಯಕ್ಷರಾದ ಸುರೇಶ್ ಮತಿತ್ತರಿದ್ದರು.

(Visited 5 times, 1 visits today)