ತುಮಕೂರು
ಕನ್ನಡ ಭಾಷೆಯನ್ನು ಉಳಿಸುವುದು ನಮ್ಮೆಲ್ಲರ ಹೊಣೆ. ಕನ್ನಡ ಭಾಷೆ ನಮ್ಮೆಲ್ಲರ ಕನ್ನಡಿ ಆಗಲಿ ಎಂದು ತುಮಕೂರು ವಿವಿ ಕುಲಪತಿ ಪ್ರೊ. ಎಂ ವೆಂಕಟೇಶ್ವರಲು ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾನಿಲಯದ ವತಿಯಿಂದ ತುಮಕೂರು ವಿವಿಯ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮನಸ್ಸಿನಲ್ಲಿ ಉತ್ತಮ ವಿಚಾರಗಳಿದ್ದರೆ, ಉತ್ತಮ ಭಾಷೆ ಹೊರಹೊಮ್ಮಲು ಸಾಧ್ಯ. ಕನ್ನಡ ಭಾಷೆ ಮೈ ರೋಮಂಚನ ಗೊಳಿಸುತ್ತದೆ. ಕನ್ನಡಕ್ಕೆ, ಕರುನಾಡಿಗೆ ಉತ್ತಮ ಕೊಡುಗೆ ನೀಡಿದ ಕವಿಗಳು, ಸಾಹಿತಿಗಳು, ನಟರು ಮುಂತಾದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಡಾ. ಕೋಡಿ ರಂಗಪ್ಪ ಅವರು ಮಾತನಾಡಿ, ದೂರದೃಷ್ಟಿ, ಸಮಾನತೆ ಸ್ತ್ರೀ ಸಮಾನತೆ, ಹಿಂದುಳಿದ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಕನ್ನಡ ಸಾಹಿತ್ಯ ಎತ್ತಿದ ಕೈ. ಪರೀಕ್ಷೆಗಳ ರ್ಯಾಂಕ್ ಜೀವನದ ರ್ಯಾಂಕ್ ಆಗಬೇಕು. ಅಂತಹ ರ್ಯಾಂಕ್ ಜೊತೆಯಲ್ಲಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು. ವ್ಯಕ್ತಿತ್ವ ಬೆಳೆಯಬೇಕೆಂದರೆ ಹೆಚ್ಚಿನದಾಗಿ ಪುಸ್ತಕಗಳನ್ನು ಓದುವುದು ಮುಖ್ಯ. ಇದನ್ನು ವಿದ್ಯಾರ್ಥಿಗಳು ಮನಗಾಣಬೇಕು ಎಂದು ಕಿವಿ ಮಾತು ಹೇಳಿದರು.
ವಿವಿಯ ಕುಲಸಚಿವರಾದ ಪ್ರೊ. ಕೆ ಶಿವಚಿತ್ತಪ್ಪ ಅವರು ಮಾತನಾಡಿ, ಕನ್ನಡ ಭಾಷೆ, ಜಲ, ನಾಡು-ನುಡಿ ಹಾಗೆಯೇ ಕನ್ನಡ ಜನರ ಮೇಲೆ ಪ್ರೀತಿ ಇರಬೇಕು. ವಿಶ್ವವ್ಯಾಪಿಯಾಗಿ ಕನ್ನಡ ಭಾಷೆ ಪಸರಿಕೊಂಡಿದ್ದು, ಕನ್ನಡ ಭಾಷೆಯನ್ನು ಮಾತನಾಡುವಂತಹ ಜನರನ್ನು ಪ್ರೀತಿಸಿ, ಗೌರವಿಸಬೇಕಿದೆ ಎಂದರು.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೆ ಎಸ್ ಸಿದ್ಧಲಿಂಗಪ್ಪ ಮಾತನಾಡಿ, ಕನ್ನಡ ಭಾಷೆಗೆ ಇರುವಂತಹ ಸಾವಿರಾರು ಇತಿಹಾಸ, ಸತ್ವವನ್ನು, ಕನ್ನಡ ಕವಿಗಳು ಏನು ಹೇಳಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯೋತ್ಸವ ಪುರಸ್ಕøತರಾದ ಪ್ರೊ. ಕೆ ಸಿದ್ದಪ್ಪ, ತುಮಕೂರು ವಿವಿಯ ರಾಷ್ಟ್ರೀಯ ಹಬ್ಬಗಳ ಆಚರಣೆಯ ಸಂಯೋಜಕರಾದ ಡಾ. ಎ ಎಂ ಮಂಜುನಾಥ, ವಿವಿಯ ಪ್ರಾಧ್ಯಾಪಕರುಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.