ತುಮಕೂರು
ರಾಜ್ಯದಲ್ಲಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಸರಕಾರೇತರ ಸಂಸ್ಥೆಗಳನ್ನ ಬಳಸಿಕೊಂಡು ಕಾಂಗ್ರೆಸ್ ಪರವಾಗಿರುವ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದು, ಚುನಾವಣೆಯನ್ನು ವಾಮ ಮಾರ್ಗದಲ್ಲಿ ಗೆಲ್ಲಲ್ಲು ಹೊರಟಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ರಾಮಕೃಷ್ಣ ಆರೊಪಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಆಯೋಜಿಸಿದ್ದ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಚಿಲುಮೆ ಎಂಬ ಎನ್.ಜಿ.ಓ ಮೂಲಕ ಕಾಂಗ್ರೆಸ್ ಪರವಾಗಿ ಮತ ಚಲಾಯಿಸುವ ಮತದಾರರನ್ನು ಗುರುತಿಸಿ, ಅವರನ್ನು ಮತದಾರರ ಪಟ್ಟಿಯಿಂದ ಡಿಲೀಟ್ ಮಾಡುವ ಹುನ್ನಾರ ನಡೆಸಿದೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಇದೇ ರೀತಿಯ ಪ್ರಯತ್ನ ನಡೆದಿದ್ದು,ಈ ಬಾರಿ ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ವ್ಯಾಪಕವಾಗಿ ಕಾಂಗ್ರೆಸ್ ಮತದಾರರನ್ನು ಕೈಬೀಡುವ ಹುನ್ನಾರ ನಡೆಸಿದೆ. ತುಮಕೂರು ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣ ಕಂಡು ಬಂದರೆ ಉಗ್ರ ಹೋರಾಟ ನಡೆಸಲಾಗುವುದು. ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವಂತೆ ಆಗ್ರಹಿಸಿದರು.
ಮಾಜಿ ಶಾಸಕ ಹಾಗೂ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಡಾ.ರಫೀಕ್ ಅಹಮದ್ ಮಾತನಾಡಿ,ಶ್ರೀಮತಿ ಇಂದಿರಾಗಾಂಧಿ ಅವರ 16 ವರ್ಷಗಳ ಆಡಳಿತ ಇಡೀ ದೇಶದ ರಾಜಕೀಯದಲ್ಲಿಯೇ ಅತ್ಯಂತ ಮಹತ್ವದ ದಿನಗಳಾಗಿವೆ.ಬಾಂಗ್ಲಾ ವಿಭಜನೆ, ತುರ್ತು ಪರಿಸ್ಥಿತಿ ಸೇರಿದಂತೆ ಹಲವಾರು ಗಟ್ಟಿ ನಿರ್ಧಾರಗಳು ಇಡೀ ಪ್ರಪಂಚದಲ್ಲಿಯೇ ಭಾರತದ ಗಟ್ಟಿತನ ಪ್ರದರ್ಶನಗೊಂಡ ಕಾಲ.ಉಳುವವನೇ ಭೂ ಒಡೆಯ,ಗರೀಭ್ ಹಠವೋ,ಅತ್ಯಂತ ಜನಪರ ಕಾರ್ಯಕ್ರಮಗಳು,ಇವುಗಳ ಬಗ್ಗೆ ಜನರು ಅರಿತಿದ್ದಾರೆ.ಇಂದಿಗೂ ಅವುಗಳ ನೆನಪಿನಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವ ಮತದಾರರಿರುವುದು ಇಂದಿರಾಗಾಂಧಿ ಅವರ ದೂರದೃಷ್ಟಿ ಆಡಳಿತಕ್ಕೆ ಹಿಡಿದ ಕನ್ನಡಿ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೆಂಚಮಾರಯ್ಯ, ಕೆಂಚಮಾರಯ್ಯ ಹಾಗೂ ಮಹಿಳಾ ಮುಖಂಡರಾದ ಶ್ರೀಮತಿ ಅರುಂಧತಿ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಎಸ್.ಷಪಿಅಹಮದ್,ಮುಖಂಡರಾದ ಮಂಜುನಾಥ್,ಡಾ.ಫರ್ಹಾನಾ, ಹಿದಾಯುತ್ ಹುಸೇನ್,ನಯಾಜ್ ಅಹಮದ್, ಮಹೇಶ್, ನರಸಿಂಹಯ್ಯ, ಸಂಜೀವಕುಮಾರ್, ಮೆಹಬೂಬ್ ಪಾಷ, ನಟರಾಜಶೆಟ್ಟಿ, ಗೀತಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.