ತುಮಕೂರು


ಜಯ ಕರ್ನಾಟಕ ಜನಪರ ವೇದಿಕೆವತಿಯಿಂದ ಬಸವೇಶ್ವರ ನಗರದ ದಾರಿ ದೀಪ ಚಾರಿಟಬಲ್ ಟ್ರಸ್ಟ್(ರಿ) ಆವರಣದಲ್ಲಿ ಕನ್ನಡ ರಾಜೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಯಕರ್ನಾಟಕ ಜನಪರವೇದಿಕೆಯ ರಾಜ್ಯ ಕಾರ್ಯದರ್ಶಿ ಎನ್.ರಾಘವೇಂದ್ರ(ರಘು)ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದಾರಿದೀಪ ಚಾರಿಟಬಲ್ ಸಂಸ್ಥೆಗೆ ಅಗತ್ಯವಿರುವ ದಿನಸಿ ಪದಾರ್ಧಗಳು, 100 ಆಟೋ ಚಾಲಕರಿಗೆ ಸಮವಸ್ತ್ರ ಹಾಗೂ ಗೋಕುಲ ಬಡಾವಣೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಡಾ.ರಫೀಕ್ ಅಹಮದ್,ಕನ್ನಡ ರಾಜೋತ್ಸವವೆಂದರೆ ರಸಮಂಜರಿ ಕಾರ್ಯಕ್ರಮಗಳಿಗೆ ಸಿಮೀತವಾಗಿರುವ ಇಂತಹ ಹೊತ್ತಿನಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಅಂಧ ಹೆಣ್ಣು ಮಕ್ಕಳು ಸನಿವಾಸ ಕೇಂದ್ರ ದಾರಿದೀಪ ಸಂಸ್ಥೆಯ ಮಕ್ಕಳಿಗೆ ಅಗತ್ಯವಿರುವ ದಿನಸಿ ಪದಾರ್ಥ,ಆಟೋಚಾಲಕರಿಗೆ ಸಮವಸ್ತ್ರ ಸೇರಿದಂತೆ ಹಲವು ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ವಿಭಿನ್ನವಾಗಿ ರಾಜೋತ್ಸವ ಆಚರಿಸುತ್ತಿರುವುದು ಸಂತೋಷದ ವಿಚಾರವಾಗಿದೆ.ಇಂತಹ ಮತ್ತಷ್ಟು ಕಾರ್ಯಕ್ರಮಗಳ ಮೂಲಕ ಜನಪರ ವೇದಿಕೆ ಎಂಬ ಮತ್ತಷ್ಟು ಹೆಸರು ಪಡೆಯಲಿ ಎಂದು ಶುಭ ಹಾರೈಸಿದರು.
ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ.ಅನೇಕ ಮಹನೀಯರು ಭಾಷೆಯ ಉಳಿವಿಗಾಗಿ ಅವಿರತ ಶ್ರಮಿಸಿದ್ದಾರೆ.ಇಂದಿನ ಯುವ ಪೀಳಿಗೆ ಉದ್ಯೋಗಕ್ಕಾಗಿ ಬೇರೆ ಭಾಷೆಯನ್ನು ಅಪ್ಪಿಕೊಂಡು, ಕನ್ನಡವನ್ನು ಕಡೆಗಣಿಸುತ್ತಿದ್ದಾರೆ.ಬೇರೆ ಭಾಷೆ ಕಲಿಯುವುದು ತಪ್ಪಲ್ಲ. ಆದರೆ ಕನ್ನಡಕ್ಕೆ ಮೊದಲ ಅದ್ಯತೆ ನೀಡೋಣ, ನಂತರ ಇತರೆ ಭಾಷೆಗಳನ್ನು ಪ್ರೀತಿಸೋಣ ಎಂದು ಡಾ.ರಫೀಕ್ ಅಹಮದ್ ಸಲಹೆ ನೀಡಿದರು.
ಕನ್ನಡ ಸೇನೆಯ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಕಾರ್ಯದರ್ಶಿ ಯಾಗಿರುವ ಎನ್.ರಾಘವೇಂದ್ರ ಅವರು ಎಲೆ ಮೆರೆಯ ಕಾಯಿಯಂತೆ ತಮ್ಮ ಸಮಾಜ ಸೇವಾ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದಾರೆ.ದಾರಿದೀಪ ಸಂಸ್ಥೆಯ ಶಿವಕುಮಾರ ಸಹ ಅಂಧ ಹೆಣ್ಣು ಮಕ್ಕಳ ಸ್ವಾವಲಂಬಿ ಜೀವನಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಇಂತಹ ಸಂಸ್ಥೆಯ ಬೆಳವಣಿಗೆಗೆ ನಾವೆಲ್ಲರೂ ಕೈಜೋಡಿಸಬೇಕೆಂದರು.
ನಗರಪಾಲಿಕೆ ಮಾಜಿ ಸದಸ್ಯ ಹಾಗೂ ಉದ್ಯಮಿ ಡೆಲ್ಟಾ ರವಿ ಮಾತನಾಡಿ,ಸರಕಾರಗಳು ಜನಸಾಮಾನ್ಯರನ್ನು ಸವಲತ್ತುಗಳಿಗಾಗಿ ಅಲೆಸದೆ ಅವರ ಮನೆ ಬಾಗಿಲಿಗೆ ತಲುಪಿಸುವಂತಹ ಕಾರ್ಯ ಮಾಡಬೇಕಿದೆ.ಪ್ರತಿಯೊಂದಕ್ಕೂ ಹೋರಾಟ ಮಾಡಬೇಕೆಂದರೆ ಜನರಿಗೆ ಬೇಸರವೆನಿಸುತ್ತದೆ. ಕನಿಷ್ಠ ಮೂಲಭೂತ ಸೌಕರ್ಯ ನೀಡಲು ಸರಕಾರ ಮುಂದಾಗಬೇಕಿದೆ. ಇಲ್ಲದಿದ್ದಲ್ಲಿ ಅಭಿವೃದ್ದಿ ಎಂಬುದು ಕೇವಲ ಬೂಟಾಟಿಕೆಯ ಮಾತಾಗಲಿದೆ. ಕನ್ನಡ ನಾಡು, ನುಡಿಗೆ ಸಂಬಂದಿಸಿದಂತೆಯೂ ಸರಕಾರಗಳು ಗಮನ ಹರಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಯಕರ್ನಾಟಕ ಜನಪರ ವೇದಿಕೆಯ ಬೆಂಗಳೂರು ಜಿಲ್ಲಾಧ್ಯಕ್ಷ ಶ್ರೀನಿವಾಸ,ಡೈವಿಂಗ್ ಸ್ಕೂಲ್ ಅಸೋಸಿಯೇಷನ್ ಗೌರವಾಧ್ಯಕ್ಷ ಟಿ.ಆರ್.ಸದಾಶಿವಯ್ಯ, ಜಯಕರ್ನಾಟಕ ಜನಪರ ವೇದಿಕೆ ಆಟೋ ಘಟಕದ ಅಧ್ಯಕ್ಷ ನಾಗೇಂದ್ರಪ್ಪ, ಶ್ರೀಧರ್, ಪ್ರವೀಣಶಿಂಧೆ, ಜಯಪ್ರಕಾಶ್(ಜಿಮ್ ಜೆಪಿ),ಚಿಂಗಿರವಿ, ಮಮತ, ಶಿವಕುಮಾರ್ ರೂಪತಾರಾ, ಹರೀಶ್ ಮತ್ತಿತರರು ಪಾಲ್ಗೊಂಡಿದ್ದರು.

(Visited 5 times, 1 visits today)