ತುಮಕೂರು
ರಾಜ್ಯದಲ್ಲಿ 2023ಕ್ಕೆ ನಡೆಯುವ ವಿಧಾನಸಭಾ ಚುನಾವಣೆಗೆ ಸಿದ್ದಗೊಳುತ್ತಿರುವ ಮತಪಟ್ಟಿಯಲ್ಲಿ ಸಾಕಷ್ಟು ಅವ್ಯವಹಾರಗಳು ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತರ ಘಟಕದವತಿಯಿಂದ ಮತಪಟ್ಟಿ ಜಾಗೃತಿ ಅಭಿಯಾನ ಆರಂಭಿಸಿದ್ದು,ಯಾರೊಬ್ಬರು ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಇದರ ಹಿಂದಿನ ಉದ್ದೇಶ ಎಂದು ಆತೀಕ್ ಅಹಮದ್ ತಿಳಿಸಿದ್ದಾರೆ.
ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದವತಿಯಿಂದ ಆಯೋಜಿಸಿದ್ದ ಮತದಾರರ ಪಟ್ಟಿ ಪರಿಶೀಲನಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಬಿಜೆಪಿಯ ಅಭಿವೃದ್ದಿ ಶೂನ್ಯ ಅಡಳಿತವನ್ನು ಪ್ರಶ್ನಿಸುವ ಮತ್ತು ಬಿಜೆಪಿಯೇತರ ಪಕ್ಷಗಳಿಗೆ ಮತ ಹಾಕುವ ವ್ಯಕ್ತಿಗಳನ್ನು ಗುರುತಿಸಿ, ಅವರ ಹಕ್ಕುಗಳನ್ನು ಕಸಿಯುವ ಕೆಲಸವನ್ನು ಆಡಳಿತ ಬಿಜೆಪಿ ಪಕ್ಷ ಮಾಡಲು ಹೊರಟಿದೆ.ಇದಕ್ಕೆ ಎಂದಿಗೂ ನಾವು ಅವಕಾಶ ನೀಡುವುದಿಲ್ಲ.ಶೀಘ್ರದಲ್ಲಿಯೇ ಅಲ್ಪಸಂಖ್ಯಾತರ ಇರುವ ಜಾಗಗಳಲ್ಲಿ ನಮ್ಮ ಘಟಕದವತಿಯಿಂದ ಕ್ಯಾಂಪ್ ಮಾಡಿ,ಪ್ರತಿಯೊಬ್ಬ ಮತದಾರರನ್ನು ಪರೀಕ್ಷಿಸಿ, ಅವರ ಹಕ್ಕುಗಳನ್ನು ಖಾತರಿ ಪಡಿಸುವ ಕೆಲಸ ಮಾಡಲಾಗುವುದು ಎಂದರು.
ತುಮಕೂರಿನ 35 ವಾರ್ಡ್‍ಗಳಲ್ಲಿಯೂ ಅಲ್ಪಸಂಖ್ಯಾತರ ಘಟಕದವತಿಯಿಂದ ಮತದಾರರನ್ನು ಜಾಗೃತಿ ಗೊಳಿಸುವುದು ಜೊತೆ ಮತದಾನದ ಅರಿವು, ಮಹತ್ವ ತಿಳಿಸುವುದರ ಮೂಲಕ ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಭಾನುವಾರ ಚಾಲನನೆ ನೀಡಲಾಗಿದೆ.ನಾವು ಯಾರ ಮನೆ ಬಾಗಿಲಿಗೂ ಬರುವುದಿಲ್ಲ. ತಮ್ಮ ಹಕ್ಕು ಬೇಕೆಂದು ಪ್ರತಿಪಾದಿಸುವವರು ನಮ್ಮ ಬಳಿ ಬಂದು ತಮ್ಮ ಓಟರ್ ಐಡಿಯನ್ನು ಪರಿಶೀಲಿಸಿ, ಖಾತರಿ ಪಡಿಸಿಕೊಳ್ಳಬಹುದಾಗಿದೆ ಎಂದು ಆತೀಕ್ ಅಹಮದ್ ನುಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ್ ಹಾಲಪ್ಪ ಮಾತನಾಡಿ,ಅಂಬೇಡ್ಕರ್ ಕೊಟ್ಟ ಹಕ್ಕು ಕಸಿಯಲು ಬಿಜೆಪಿ ಪಕ್ಷ ಮುಂದಾಗಿದೆ.ತುಮಕೂರು ನಗರದಲ್ಲಿ 15 ಸಾವಿರದಿಂದದಿಂದ 35 ಸಾವಿರಕ್ಕೂ ಹೆಚ್ಚು ದಲಿತರು, ಅಲ್ಪಸಂಖ್ಯಾತರು, ಕ್ರೈಸ್ತರು ಹಾಗೂ ಕೆಳವರ್ಗದ ಮತದಾರರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಶಿವಾಜಿ,ಅಬ್ದುಲ್ ವಾಹಿದ್ ಆನ್ಸರ್,ಥಾಮಸ್, ಕಾಂಗ್ರೆಸ್ ಮುಖಂಡ ರಹೀಮ್ ಸೇರಿದಂತೆ ಹಲವು ನಾಯಕರು ಹಾಜರಿದ್ದರು.