ತುಮಕೂರು
ಸ್ವಾತಂತ್ರ ಹೋರಾಟಗಾರರನ್ನು ಮಾದರಿಯಾಗಿಟ್ಟುಕೊಂಡು ತಾಯಂದಿರುವ ತಮ್ಮ ಮಕ್ಕಳಿಗೆ ಹೋರಾಟ ಮನೋಭಾವ ಮೂಡಿಸಬೇಕೆಂದು ಸಮಾಜಸೇವಕ ಹಾಗೂ ಉದ್ಯಮಿ ಎಸ್.ಪಿ.ಚಿದಾನಂದ್ ತಿಳಿಸಿದ್ದಾರೆ.
ನಗರದ ಬಾಳನಕಟ್ಟೆಯಲ್ಲಿರುವ ಸ್ವಾತಂತ್ರ ಹೋರಾಟಗಾರರ ವೀರಸೌಧದಲ್ಲಿ ಅಯೋಜಿಸಿದ್ದ ವಿಶ್ವಭಾರತಿಗೆ ಕನ್ನಡದಾರತಿ, ಕನ್ನಡ ರಾಜೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಸ್ವಾತಂತ್ರಕ್ಕಾಗಿ ತಮ್ಮ ಮನೆ, ಮಠ, ಸಂಸಾರವನ್ನು ತೊರೆದು,ಭೂಗತರಾಗಿ ಹೋರಾಟ ನಡೆಸಿದ ಸ್ವಾತಂತ್ರ ಹೋರಾಟಗಾರರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ.ಹಾಗಾಗಿ ನಮ್ಮ ಮಕ್ಕಳಿಗೆ ಇಂತಹವರನ್ನು ಆದರ್ಶವಾಗಿಟ್ಟು, ಮಕ್ಕಳಲ್ಲಿಯೂ ಹೋರಾಟದ ಮನೋಭಾವನೆ ಬೆಳೆಯುವಂತೆ ಮಾಡಬೇಕಿದೆ ಎಂದರು.
ಸ್ವಾತಂತ್ರ ಹೋರಾಟದ ದಿನಗಳ ಅಷ್ಟು ಸುಲಭವಾಗಿರಲಿಲ್ಲ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ.ಇಂದು ಜನಪರ ಹೋರಾಟಗಾರರಿಗೆ ಜನರು, ನೀರು, ಆಹಾರ ನೀಡಿ, ಪ್ರಯಾಣಕ್ಕೆ ವ್ಯವಸ್ಥೆ ಮಾಡಿ ಪ್ರೋತ್ಸಾಹ ನೀಡುತ್ತಾರೆ.ಆದರೆ ಅಂದು ಸ್ವಾತಂತ್ರ ಹೋರಾಟಗಾರರಿಗೆ ಅನ್ನ,ನೀರು,ಆಶ್ರಯ ಕೊಡದಂತೆ ಬ್ರಿಟಿಷರಿಂದ ಕಟ್ಟಪ್ಪಣೆ ಇತ್ತು.ಅನೇಕ ದಿನಗಳ ಕಾಲ ಭೂಗತರಾಗಿಯೇ,ಬರಿಗಾಲಲ್ಲಿಯೇ ನಡೆದುಕೊಂಡು,ಒಂದು ಊರಿನಿಂದ ಮತ್ತೊಂದು ಊರು ಹೋಗಿ ಅಲ್ಲಿನ ಜನರಿಗೆ ಸ್ವಾತಂತ್ರದ ಕಿಚ್ಚು ಹಚ್ಚಬೇಕಾಗಿತ್ತು. ನಿಜಕ್ಕೂ ಆ ದಿನಗಳ ಭಾರತದ ಸ್ವಾತಂತ್ರದ ಹೋರಾಟದ ಪಾಲಿಗೆ ಸವಾಲಿನ ದಿನಗಳು ಎಂದು ಎಸ್.ಪಿ.ಚಿದಾನಂದ ಪ್ರಶಂಶಿಸಿದರು.
ಟೂಡಾ ಅಧ್ಯಕ್ಷ ಹಾಗೂ ಉದ್ಯಮಿ ಹೆಚ್.ಜಿ.ಚಂದ್ರಶೇಖರ್ ಮಾತನಾಡಿ,ಸ್ವಾತಂತ್ರ ಹೋರಾಟಗಾರರಿಗೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಋಣಿಯಾಗಬೇಕು.ತಮ್ಮ ಹೆಂಡತಿ,ಮಕ್ಕಳನ್ನು ಮರೆತು ಹೋರಾಟ ನಡೆಸಿದ್ದರಿಂದ,ಅವರ ಕುಟುಂಬಸ್ಥರು ಸಾಕಷ್ಟು ನೋವು ಅನುಭವಿಸಿದ್ದರು.ಇಂದು ಬೆರಳೆಣಿಕೆಯ ಸಂಖ್ಯೆಯಲ್ಲಿರುವ ಸ್ವಾತಂತ್ರ ಹೋರಾಟಗಾರರು ಮತ್ತು ಅವರು ಕುಟುಂಬವನ್ನು ಗೌರವದಿಂದ ಕೆಲಸ ಆಗಬೇಕು.ಸ್ವಾತಂತ್ರವೆಂದರೆ ಸ್ವೆಚ್ಚಾಚಾರವಲ್ಲ ಎಂಬುದನ್ನು ನಾವೆಲ್ಲರೂ ಅರಿಯಬೇಕಿದೆ. ನಮ್ಮ ಮಕ್ಕಳಿಗೆ ಸಂಸ್ಕಾರ, ಸಂಸ್ಕøತಿಯನ್ನು ಪರಿಚಯಿಸುವ ಕೆಲಸ ಆಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎನ್.ಸಂಪತ್ ಮಾತನಾಡಿ,ಸ್ವಾತಂತ್ರ ಹೋರಾಟದ ಸಂದರ್ಭದಲ್ಲಿ ನೂರಾರು ಸಂಖ್ಯೆಯಲ್ಲಿದ್ದ ನಾವುಗಳು ಇಂದು ಬೆರಳೆಣಿ ಯಷ್ಟಿದ್ದೇವೆ. ಜಿಲ್ಲಾಧಿಕಾರಿ ಸುಜಾತ ಅವರು ಇರುವ ಸಂದರ್ಭದಲ್ಲಿ ನಮ್ಮ ಸಂಘಕ್ಕೆ ಸುಮಾರು 15 ಗುಂಟೆ ಜಮೀನು ನೀಡಿದ್ದರು. ಹೆಚ್.ಡಿ.ರೇವಣ್ಣ ಅವರು ಇರುವ ಸಂದರ್ಭದಲ್ಲಿ ಸುಮಾರು 46.50 ಲಕ್ಷ ರೂಗಳನ್ನು ಮಂಜೂರು ಮಾಡಿಕೊಟ್ಟು,ಇಂದು ನಾವು ಕಾರ್ಯಕ್ರಮ ಮಾಡುತ್ತಿರುವ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ್ದರು.ಈ ಕಟ್ಟಡದಲ್ಲಿ 12 ಅಂಗಡಿ ಮಳಿಗೆಗಳಿದ್ದು, 40 ಲಕ್ಷ ರೂಗಳಿಗೂ ಅಧಿಕ ಬಾಡಿಗೆ ಹಣ ಬಾಕಿ ಇದೆ.ನಮ್ಮ ಕಣ್ಣ ಮುಂದೆಯೇ ಕಟ್ಟಡ ಹಾಳಾಗಬಾರದು ಎಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ ಎಂದರು.
ವೇದಿಕೆಯಲ್ಲಿ ಸ್ವಾತಂತ್ರ ಹೋರಾಟಗಾರರ ಸಂಘದ ಉಪಾಧ್ಯಕ್ಷ ಟಿ.ಆರ್.ರೇವಣ್ಣ, ಸಾಹಿತಿ ಡಾ.ಕವಿತಾಕೃಷ್ಣ,ಇತಿಹಾಸ ಸಂಶೋಧಕ ಡಾ.ಎನ್.ನಂದೀಶ್ವರ್,ಸಂಘ ಪ್ರಧಾನ ಕಾರ್ಯದರ್ಶಿ ಕೆ.ಆರ್,ಎಂ.ಸುದರ್ಶನ್, ಸಂಘಟನಾ ಕಾರ್ಯದರ್ಶಿ ಎಸ್.ಚನ್ನಕೇಶವಯ್ಯ, ಖಜಾಂಚಿ ತು.ಮು.ಬಸವರಾಜು, ಮಹಿಳಾ ಘಟಕದ ಶ್ರೀಮತಿ ಪ್ರೇಮಲತ, ಕುಸುಮ ಶಂಕರಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಸ್ವಾತಂತ್ರ ಹೋರಾಟಗಾರರ ಕುರಿತ ಪ್ರಬಂಧ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ
ಬಹುಮಾನ ವಿತರಿಸಲಾಯಿತು.