ತುರುವೇಕೆರೆ
ಮನುಷ್ಯನಿಗೆ ಆಹಾರ ಅತ್ಯಮೂಲ್ಯ ಹಾಗಾಗಿ ಈ ಭಾಗದ ರೈತರು ಭತ್ತದ ಬೆಳೆ ಬೆಳೆಯ ಬೇಕು. ಅದಕ್ಕೆ ಪೂರಕವಾಗಿ ರೈತರು ಇಚ್ಛಿಸಿದಾಗ ಬಯಲಿಗೆ ನೀರನ್ನು ಬಿಟ್ಟುಕೊಡಲಾಗುವುದೆಂದು ಶಾಸಕ ಮಸಾಲ ಜಯರಾಂ ರೈತರಲ್ಲಿ ಕಳಕಳಿ ಮನವಿ ಮಾಡಿದರು.
ತಾಲ್ಲೂಕಿನ ದಂಡಿನಶಿವರ ಹೋಬಳಿಯ ಮಾಚೇನಹಳ್ಳಿ ಗ್ರಾಮದಲ್ಲಿ ತಾಲ್ಲೂಕು ಆಡಳಿತ ಹಾಗು ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಸಿ ಮಾತನಾಡಿದರು.
ಭತ್ತ ಬೆಳೆಯಲು ಹೆಚ್ಚು ಖರ್ಚು ಬರುತ್ತದೆಂದು ಆ ಬೆಳೆ ಬೆಳೆಯಲು ರೈತರು ನಿರುತ್ಸಾಹ ತೋರಿದರು. ಈ ಬಾರಿಯಿಂದ ರೈತರ ಜಮೀನಿಗಳಲ್ಲಿ ಹಾಯ್ದು ಹೋಗಿರುವ ಸಣ್ಣ ನಾಲುವೆಗಳ ಸ್ವಚ್ಛಗೊಳಿಸಲು ಮತ್ತು ಕೆರೆ ತೂಬಿನ ರಿಪೇರಿಗೆ ಮೂರುವರೆ ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ.
ರೈತರು ಬಯಸಿದಾಗ ಬಯಲಿಗೆ ನೀರು ಬಿಡಲಾಗುವುದು. ದಯ ಮಾಡಿ ರೈತರು ವಾಣಿಜ್ಯ ಬೆಳೆಗಳಾದ ಕೊಬ್ಬರಿ, ಅಡಿಕೆಗಿಂತಲೂ ಬಹುಮುಖ್ಯವಾಗಿ ಬೇಸಿಗೆಯಲ್ಲಿ ಭತ್ತದ ಬೆಳೆಯನ್ನು ಬೆಳೆಯುವ ಮೂಲಕ ಸ್ವಾವಲಂಭಿ ರೈತರಾಗ ಬೇಕು ಎಂದು ಕರೆಕೊಟ್ಟರು.
ರಾಗಿ ಬೆಳೆಯಲ್ಲಿ ಹೊಸ ತಳಿ ಬಂದಿದ್ದು, ಈ ಬಗ್ಗೆ ರೈತರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು ಮಾಹಿತಿ ಪಡೆದ ರೈತರು ಆ ತಳಿಯ ರಾಗಿ ಬೆಳೆದು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಮೇಲುಗೈ ಸಾಧಿಸಬೇಕೆಂದು ಕಿವಿ ಮಾತು ಹೇಳಿದರು. ಈ ಭಾಗದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.
ಸಾರಿಗೇಹಳ್ಳಿ ಕೆರೆಗೆ ಹೇಮಾವತಿ ನಾಲಾ ನೀರು ಹರಿಸಲು ಸಚಿವ ಮಾಧುಸ್ವಾಮಿಯವರ ಪ್ರಯತ್ನದಿಂದ ನೀರು ಹರಿಸಲು ಸಾದ್ಯವಾಯಿತು ಈ ಭಾಗದ ಜನರ ಪರವಾಗಿ ಅವರಿಗೆ ಅಭಿನಂಧನೆ ಸಲ್ಲಿಸುವೆ ಎಂದರು.
ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಮಾತನಾಡಿ, ಆಹಾರ ಇಲಾಖೆಗೆ 1, ತಾಲ್ಲೂಕು ಪಂಚಾಯಿತಿಗೆ 20, ಕಂದಾಯ ಇಲಾಖೆಗೆ 19, ಬೆಸ್ಕಾಂ 1, ಕೃಷಿ ಇಲಾಖೆಗೆ 1 ಇನ್ನಿತರೆ ಸೇರಿ ಒಟ್ಟು 47 ಅರ್ಜಿಗಳು ಸ್ವೀಕೃತವಾಗಿದ್ದು ಸ್ಥಳದಲ್ಲಿರುವ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ ಕೆಲವು ಅರ್ಜಿಗಳು ತಾಂತ್ರಿಕ ಕಾರಣದಿಂದ ವಿಳಂಬವಾಗಿದ್ದು ಇನ್ನು 7 ದಿನದೊಳಗೆ ಪರಿಹಾರ ದೊರಕಿಸಿಕೊಡಲಾಗುವುದೆಂದು ಭರವಸೆ ನೀಡಿದರು.
ಇದೇ ವೇಳೆ ಗರ್ಭಿಣಿ ಸ್ತ್ರೀಯರಿಗೆ ಸೀಮಂತ ಕಾರ್ಯ ನಡೆಸಿಕೊಡಲಾಯಿತು. ಭಾಪೂಜಿ ಕೇಂದ್ರೀಯ ಪ್ರೌಢ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯ ಕ್ರಮಗಳು ಜರುಗಿದವು.
ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಕೆ.ಪದ್ಮನಾಭ, ಸಿಡಿಪಿಒ ಅರುಣ್‍ಕುಮಾರ್, ಮೀನುಗಾರಿಕೆ ಇಲಾಖೆಯ ಮೋಹನ್ ಕುಮಾರ್, ಬೆಸ್ಕಾಂ ಎಇಇ ಚಂದ್ರಾನಾಯಕ್, ಟಿಎಚ್‍ಒ ಡಾ.ಸುಪ್ರಿಯಾ, ಆರೋಗ್ಯ ಇಲಾಖೆಯ ಚಂದ್ರಶೇಖರ್, ಕೃಷಿ ಇಲಾಖೆಯ ಬಿ.ಪೂಜಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಶಿಕ್ಷಕ ಎಚ್.ಎಂ.ರಂಗಸ್ವಾಮಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.