ತುಮಕೂರು


ಜಿಲ್ಲಾ ಬಾಲಭವನ ಸಮಿತಿ (ರಿ) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು ಪದವಿ ಪೂರ್ವ ಶಿಕ್ಷಣ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ಇತ್ತೀಚೆಗೆ 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ “ಸಾಹಿತ್ಯ ಚಿಗುರು” ಕಾರ್ಯಗಾರ ಏರ್ಪಡಿಸಲಾಗಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಶಿವಕುಮಾರಯ್ಯ ಮಾತನಾಡಿ, ಜಿಲ್ಲಾ ಬಾಲಭವನವು ಮಕ್ಕಳಲ್ಲಿರುವ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇದರಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಭಾಷೆ, ನೆಲ, ಜಲದ ಬಗ್ಗೆ ಅಭಿಮಾನ ಮೂಡಿಸಲು, ಭಾಷೆ ಬಗ್ಗೆ ಹಿಡಿತವನ್ನು ಸಾಧಿಸಲು ಮತ್ತು ಭಾಷೆಯ ಜ್ಞಾನವನ್ನು ವೃದ್ಧಿಸಿಕೊಂಡು ಮುಂದಿನ ವೃತ್ತಿ ಜೀವನದಲ್ಲಿ ಭದ್ರ ಬುನಾದಿ ಹಾಕಲು ಸಹಕಾರಿಯಾಗುವಂತೆ ಹಾಗೂ ವಿದ್ಯಾರ್ಥಿಗಳಿಗೆ ಕಥೆ ಕವನ, ಕವಿತೆ ರಚನೆಗಳಿಂದ ಸಾಹಿತ್ಯದ ಅಭಿರುಚಿ ಬೆಳೆಸಲು ಸಾಹಿತ್ಯ ಚಿಗುರು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಈ ಕಾರ್ಯಗಾರದಲ್ಲಿ ಸಕ್ರೀಯವಾಗಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಗಾರವನ್ನು ಕುರಿತು ಮಾತನಾಡಿದ ಎಂಪ್ರೆಸ್ ಕಾಲೇಜಿನ ಪ್ರಾಂಶುಪಾಲ ಎಸ್. ಷಣ್ಮುಖ ವಿದ್ಯಾರ್ಥಿಗಳಿಗೆ ಓದಿನ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ವಿದ್ಯಾರ್ಥಿಗಳಲ್ಲಿ ಅಡಗಿರುವ ಮುಗ್ದ ಮನಸ್ಸಿನ ಪ್ರತಿಭೆಗಳನ್ನು ಹೊರತರಲು ಸಾಧ್ಯ. ಆ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲಾ ಬಾಲಭವನವು ಆಯೋಜಿಸಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿದೆ ಹಾಗೂ ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ತಿಳಿಸಿದರು.
ಕಾರ್ಯಗಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟ ಪೂರ್ವ ಅಧ್ಯಕ್ಷೆ ಬಾ.ಹಾ.ರಮಾಕುಮಾರಿ ಜಿಲ್ಲಾ ಬಾಲಭವನ ಸಮಿತಿ ವ್ಯವಸ್ಥಾಪಕ ಚೌಡಪ್ಪ ಸೇರಿದಂತೆ ವಿದ್ಯಾರ್ಥಿಗಳು, ಶಿಕ್ಷಕರು ಭಾಗವಹಿಸಿದ್ದರು. ಜಿಲ್ಲಾ ಬಾಲಭವನ ಸಮಿತಿಯ ಕಾರ್ಯಕ್ರಮ ಸಂಯೋಜಕರಾದ ಪಿ. ಮಮತ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.

(Visited 3 times, 1 visits today)