ತುಮಕೂರು
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಅತಿಹಿಂದುಳಿದ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿಬಂದಿದೆ.
ಅಹಿಂದ ಮತದಾರರೇ ಹೆಚ್ಚಿರುವ ಚಿಕ್ಕನಾಯಕಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹಿಂದುಳಿದ ಉಪ್ಪಾರ ಸಮುದಾಯದ ರೇಣುಕಯ್ಯ ಉಪ್ಪಾರ್ ಅವರಿಗೆ ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಅತಿಹಿಂದುಳಿದ ವರ್ಗಗಳ ಮುಖಂಡರು ಒತ್ತಾಯಿಸಿದ್ದಾರೆ.
ಪ್ರವರ್ಗ-1ರಲ್ಲಿರುವ ಅತಿ ಹಿಂದುಳಿದ ಜಾತಿ ಮತ್ತು ಅಲೆಮಾರಿ ಜನಾಂಗಗಳ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಉಪ್ಪಾರ, ಬೆಸ್ತ ಮತ್ತು ಗೊಲ್ಲ ಸಮುದಾಯಗಳನ್ನು ಒಗ್ಗೂಡಿಸಲು ಶ್ರಮಿಸುತ್ತಿದ್ದು, ಅತಿ ಹೆಚ್ಚು ಗೊಲ್ಲ, ಉಪ್ಪಾರ ಸಮುದಾಯದ ಮತಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ.
ಪ್ರವರ್ಗ-1ರಲ್ಲಿರುವ 96 ಸಮುದಾಯಗಳು ಅತಿ ಹಿಂದುಳಿದಿದ್ದು, ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳನ್ನು ಒಳಗೊಂಡಿದ್ದು, ಸಮುದಾಯವನ್ನು ಸಂಘಟಿಸುವ ನಿಟ್ಟಿನಲ್ಲಿ ಪ್ರಾರಂಭವಾದ ಪ್ರವರ್ಗ-1ರ ಸಂಘಟನೆಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರುತ್ತಿರುವ ರೇಣುಕಯ್ಯ ಉಪ್ಪಾರ್ ಅವರು, ಉದ್ಯಮಿಯಾಗಿ ಪ್ರವರ್ಗ-1ರ ಸಂಘಟನೆಯನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಸಂಘಟಿಸಿದ್ದಾರೆ.
ಪ್ರವರ್ಗ-1ರ ರಾಜ್ಯಾಧ್ಯಕ್ಷರಾಗಿರುವ ಡಿ.ಟಿ.ಶ್ರೀನಿವಾಸ್ ಅವರು ರೇಣುಕಯ್ಯ ಉಪ್ಪಾರ್ ಅವರನ್ನು ಬೆಂಬಲಿಸಿದ್ದು, ಗೊಲ್ಲ, ಉಪ್ಪಾರ, ಬೆಸ್ತ ಸಮುದಾಯ ಹೆಚ್ಚಿರುವ ಚಿಕ್ಕನಾಯಕಹಳ್ಳಿಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದರೆ, ಅಲ್ಪಸಂಖ್ಯಾತ, ದಲಿತ ಸಮುದಾಯವನ್ನು ಒಗ್ಗೂಡಿಸಿಕೊಂಡು ಚುನಾವಣೆ ಗೆಲ್ಲಬಹುದಾಗಿದ್ದು, ಕಾಂಗ್ರೆಸ್ ಚಿಕ್ಕನಾಯಕನಹಳ್ಳಿ ವಿರೋಧಪಕ್ಷಗಳಿಗೆ ಪ್ರಬಲ ಸ್ಪರ್ಧೆಯನ್ನು ಒಡ್ಡಲು ಅವಕಾಶವಾಗಲಿದೆ.
ಕಾಂಗ್ರೆಸ್ ಪಕ್ಷದ ಭದ್ರ ನೆಲೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಅಹಿಂದ ವರ್ಗದ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿದರೆ ರಾಜಕೀಯ ಲೆಕ್ಕಾಚಾರವನ್ನು ಬುಡಮೇಲು ಮಾಡಲು ಅವಕಾಶವಿದ್ದು, ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಉಪ್ಪಾರ ಸಮುದಾಯ ಗೆಲುವಿಗೆ ನಿರ್ಣಾಯಕ ಪಾತ್ರವನ್ನು ವಹಿಸಲಿದ್ದು, ಉಪ್ಪಾರ ಸಮುದಾಯಕ್ಕೆ ಇದುವರೆಗೆ ಜಿಲ್ಲೆಯ ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಪಕ್ಷ ಅವಕಾಶವನ್ನು ನೀಡಿಲ್ಲ, ಈ ಬಾರಿ ಕಾಂಗ್ರೆಸ್ ಉಪ್ಪಾರ ಸಮುದಾಯಕ್ಕೆ ಅವಕಾಶ ಕಲ್ಪಿಸಿದರೆ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಲಿದೆ.
ಅಷ್ಟೇ ಅಲ್ಲದೇ ಅತಿ ಹಿಂದುಳಿದ ಸಮುದಾಯದವರಿಗೆ ಟಿಕೆಟ್ ನೀಡಿದರೆ ಉಳಿದ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆಲುವಿಗೆ ಸಹಕಾರವಾಗಲಿದ್ದು, ಈಗಾಗಲೇ ಕಾಂಗ್ರೆಸ್ ಟಿಕೆಟ್‍ಗಾಗಿ ಅರ್ಜಿ ಸಲ್ಲಿಸಿರುವ ರೇಣುಕಯ್ಯ ಉಪ್ಪಾರ್ ಅವರಿಗೆ ಟಿಕೆಟ್ ನೀಡಬೇಕೆಂದು ಪ್ರವರ್ಗ-1ರ ಮುಖಂಡರು ಒತ್ತಾಯಿಸಿದ್ದಾರೆ.