ತುಮಕೂರು
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆಯು ಡಿ. 1 ರಂದು ತುಮಕೂರು ಜಿಲ್ಲೆಗೆ ಆಗಮಿಸಲಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಆರ್.ಸಿ. ಆಂಜನಪ್ಪ ಮತ್ತು ಜಿಲ್ಲಾ ಉಸ್ತುವಾರಿ ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ತಿಳಿಸಿದರು.
ಜೆಡಿಎಸ್ ಕಚೇರಿಯಲ್ಲಿ ಜಂಟಿಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಥಮ ಹಂತದಲ್ಲಿ ಡಿ.1 ರಂದು ತುಮಕೂರು ನಗರ, 2 ರಂದು ಮಧುಗಿರಿ, 3 ರಂದು ಕೊರಟಗೆರೆ, 4 ರಂದು ಪಾವಗಡ, 5 ರಂದು ಶಿರಾ, 6 ರಂದು ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಪಂಚ ರತ್ನ ರಥಯಾತ್ರೆ ಸಂಚರಿಸಲಿದೆ.ಪೂರ್ವನಿಯೋಜಿತ ಕಾರ್ಯಕ್ರಮ ನಿಗಧಿಯಾಗಿರುವ ಕಾರಣ ಕುಮಾರಸ್ವಾಮಿ ದೆಹಲಿಗೆ ಹೋಗುವುದರಿಂದ ಮೂರು ದಿನಗಳ ಕಾಲ ವಿರಾಮವಿರುತ್ತದೆ.
ನಂತರ ಪಂಚರತ್ನ ರಥಯಾತ್ರೆಯು ಡಿ.11 ರಂದು ಚಿ.ನಾ.ಹಳ್ಳಿ, 12 ರಂದು ತುರುವೇಕೆರೆ, 13 ರಂದು ಕುಣಿಗಲ್ ಮತ್ತು 14 ರಂದು ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಂಚರಿಸಲಿದೆ ಎಂದು ತಿಳಿಸಿದರು.ರಥ ಯಾತ್ರೆಯಲ್ಲಿ ಗ್ರಾಮೀಣ ಜನರಿಗೆ ಶಿಕ್ಷಣ, ಮೂಲಸೌಕರ್ಯ, ಉದ್ಯೋಗ, ಕೃಷಿ ಹಾಗೂ ಇನ್ನಿತರೆ ಸೌಕರ್ಯಗಳ ಕುರಿತು ಜಾಗೃತಿ ಮೂಡಿಸುವ ಜೊತೆಗೆ ಪಕ್ಷದ ಸಂಘಟನೆಗೆ ಆದ್ಯತೆ ನೀಡಲಾಗುವುದು ಎಂದು ತಿಪ್ಪೇಸ್ವಾಮಿ ತಿಳಿಸಿದರು.
ತುಮಕೂರಿಗೆ ಆಗಮಿಸುವ ಯಾತ್ರೆಯು ಮೊದಲಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಸಿದ್ಧಗಂಗಾ ಮಠಾಧ್ಯಕ್ಷ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ಧಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ಧಲಿಂಗಸ್ವಾಮೀಜಿಗಳ ಆಶೀರ್ವಾದ ಪಡೆಯಲಾಗುವುದು ಎಂದು ತುಮಕೂರು ನಗರ ನಿಯೋಜಿತ ಅಭ್ಯರ್ಥಿ ಗೋವಿಂದ ರಾಜು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ತಿಪ್ಪೇಸ್ವಾಮಿ ಅವರು ನಗರ ಕ್ಷೇತ್ರದ ಅಭ್ಯರ್ಥಿ ಯಾರು ಎಂಬ ಗೊಂದಲಗಳಿಗೆ ಪಕ್ಷದ ಮುಖಂಡರು ಅಂತ್ಯಹಾಡಿದ್ದು ಗೋವಿಂದರಾಜು ಅವರೇ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲಿದ್ದಾರೆ ಎಂದರು.
ತುಮಕೂರು ನಗರ ಕ್ಷೇತ್ರದ ದಿಬ್ಬೂರು ಕಾಲೋನಿಯ ದಲಿತರ ಮನೆಯಲ್ಲಿ, ಮಧುಗಿರಿ ತಾಲೂಕಿನಲ್ಲಿ ಮಾಡಗಾನ ಹಟ್ಟಿಯ ಯಾದವರ ಮನೆಯಲ್ಲಿ ಕುಮಾರಸ್ವಾಮಿಯವರು ವಾಸ್ತವ್ಯ ಮಾಡಲಿದ್ದಾರೆ ಎಂದರು.
ಸುದ್ದಿಗೋಷ್ಟಿಯಲ್ಲಿ ಉಪಮೇಯರ್ ನರಸಿಂಹಮೂರ್ತಿ, ಶಾಸಕ ವೀರಭದ್ರಯ್ಯ, ಮಾಜಿ ಶಾಸಕರಾದ ಡಿ.ನಾಗರಾಜಯ್ಯ, ಸುಧಾಕರಲಾಲ್, ಗುಬ್ಬಿಯ ಸಂಭವನೀಯ ಅಭ್ಯರ್ಥಿ ನಾಗರಾಜು, ಶಿರಾದ ಉಗ್ರೇಶ್,ಬೆಳ್ಳಿಲೋಕೇಶ್, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ನಾಗರಾಜು,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ,ಜಿಲ್ಲಾ ಉಪಾಧ್ಯಕ್ಷ ಹಾಲನೂರು ಅನಂತ್ ಕುಮಾರ್,ನಗರಾಧ್ಯಕ್ಷ ವಿಜಿ ಗೌಡ ಉಪಸ್ಥಿತರಿದ್ದರು.