ತುಮಕೂರು


“ಮತದಾರರ ಪಟ್ಟಿ ಪರಿಷ್ಕರಣೆ” ಕಾರ್ಯ ಅತ್ಯಂತ ಪವಿತ್ರವಾದದ್ದು ಮತ್ತು ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ದೋಷರಹಿತ ಮತದಾರರ ಪಟ್ಟಿ ಮೂಲ
ಆಧಾರವಾಗಿದೆ. ಇದನ್ನು ಅರಿತು ಅಧಿಕಾರಿಗಳು ಜಾಗೃತಿಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚಿಗೆ ನಡೆದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾಗವಹಿಸಿ, ಜಿಲ್ಲೆಯ ಎಇಆರ್‍ಓ ಮತ್ತು ಇಆರ್‍ಓ ಹಾಗೂ ಇತರೆ ಅಧಿಕಾರಿಗಳೊಂದಿಗೆ ಕರಡು ಮತದಾರರ ಪಟ್ಟಿ ಪರಿಷ್ಕರಣೆ-2023ಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆ ಹಾಗೂ ಇತರೆ ಚುನಾವಣಾ ವಿಷಯಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ನು ಅನುಸರಿಸಿ ಮತದಾರರ ಪಟ್ಟಿಯನ್ನು ತಯಾರಿಸಿ ಜಾಗೃತಿಯಿಂದ ಕರ್ತವ್ಯ ನಿರ್ವಹಿಸಬೇಕು. ಕರ್ತವ್ಯದಲ್ಲಿ ಯಾವುದೇ ಲೋಪ, ನಿರ್ಲಕ್ಷ್ಯತೆ, ಬೇಜವಾಬ್ದಾರಿ ಉಂಟಾದಲ್ಲಿ ಅಂತಹ ಅಧಿಕಾರಿ/ ಸಿಬ್ಬಂದಿಯವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಕ್ರಮಕೈಗೊಳ್ಳಲಾಗುವುದು ಎಂದರು.
ನಮೂನೆ-7 ಇಲ್ಲದೆ ಯಾವುದೇ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬಾರದು. ಮರಣ ಪ್ರಕರಣಗಳಲ್ಲಿ ಹೆಸರನ್ನು ಡಿಲೀಟ್ ಮಾಡುವ ಮುನ್ನ ಈ-ಜನ್ಮ ಸಾಫ್ಟ್‍ವೇರ್‍ನಲ್ಲಿ ಪ್ರಿಂಟ್ ತೆಗೆದು, ಮರಣ ವಹಿಯನ್ನು ಹಾಗೂ ನಮೂನೆ-7ನ್ನು ಸಂಬಂಧಪಟ್ಟ ಕುಟುಂಬದವರ ಮನೆ ತೆಗೆದುಕೊಂಡು ಹೋಗಿ ನಮೂನೆ-7ನ್ನು ಭರ್ತಿ ಮಾಡಿ ನಂತರವೇ ಹೆಸರನ್ನು ತೆಗೆದು ಹಾಕಬೇಕು ಮತ್ತು ಸ್ವಯಂ ಪ್ರೇರಿತರಾಗಿ ಯಾವುದೇ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು
ಅಧಿಕಾರಿಗಳಿಗೆ ಕಟ್ಟೆಚ್ಚರ ನೀಡಿದರು.
ರೆವಿನ್ಯೂ ಇನ್ಸ್‍ಪೆಕ್ಟರ್ ಮತ್ತು ಉಪ ತಹಶೀಲ್ದಾರರಿಗೆ ಕಡ್ಡಾಯವಾಗಿ 20-30 ಮತಗಟ್ಟೆಗಳ ಜವಾಬ್ದಾರಿ ವಹಿಸಬೇಕು ಮತ್ತು ಬಿಎಲ್‍ಓಗಳು ಮನೆ-ಮನೆ ಭೇಟಿ ಮಾಡುವಿಕೆಯನ್ನು ಕಡ್ಡಾಯಗೊಳಿಸುವಂತೆ ತಹಶೀಲ್ದಾರರು ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಇಆರ್‍ಓ/ ಎಇಆರ್‍ಓಗಳು ಜನನ-ಮರಣ ರಿಜಿಸ್ಟರ್ ಮಾಹಿತಿಯನ್ನು ಬಿಎಲ್‍ಓಗಳಿಗೆ ಒದಗಿಸುವುದು ಮತ್ತು ಬಿಎಲ್‍ಓಗಳು ದಿನಾಂಕ:8-12-2022ರವರೆಗೆ ಮನೆ-ಮನೆಗೆ ಭೇಟಿ ನೀಡಿ, ಅರ್ಹ ಮತದಾರರಿಂದ ಸೇರ್ಪಡೆ, ತಿದ್ದುಪಡಿ ಹಾಗೂ ಕೈಬಿಡತಕ್ಕವುಗಳ ಬಗ್ಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಪಡೆಯತಕ್ಕದ್ದು ಮತ್ತು ಪ್ರತಿ ವಾರ ಸ್ವೀಕೃತವಾದ ಅರ್ಜಿಗಳ ಮಾಹಿತಿಯನ್ನು ಸಂಬಂಧಪಟ್ಟ ಮತಗಟ್ಟೆಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಪ್ರಚುರಪಡಿಸುವುದು ಎಂದರು.
ಎಲ್ಲ ಅರ್ಹ ಮತದಾರರು ಮತದಾರರ ಪಟ್ಟಿ ಪರಿಷ್ಕರಣೆಯ ಸದುಪಯೋಗವನ್ನು ಪಡೆದುಕೊಳ್ಳಬೇಕು, ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ನಿಗದಿತ ನಮೂನೆಯಲ್ಲಿ 08/12/2022 ರೊಳಗಾಗಿ ಆನ್‍ಲೈನ್ ಮೂಲಕ ವೋಟರ್ ಹೆಲ್ಪ್ ಲೈನ್ ಆಪ್ ಅಥವಾ ಎನ್‍ವಿಎಸ್‍ಪಿ ಆಪ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದ್ದು, ಈ ಕುರಿತು ವ್ಯಾಪಕ ಮಾಡುವಂತೆ ಸೂಚಿಸಿದರು.
ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಅವರು ಮಾತನಾಡಿ, ಎಇಆರ್‍ಓಗಳು ಪ್ರತಿ ವಾರ ಸ್ವೀಕೃತವಾಗುವ ಅರ್ಜಿಗಳು, ಅಂಗೀಕರಿಸುವ, ತಿರಸ್ಕರಿಸಲ್ಪಟ್ಟ ಅರ್ಜಿಗಳ ಮಾಹಿತಿಯನ್ನು ಮಾನ್ಯತೆ ಪಡೆದ ತಮ್ಮ ವ್ಯಾಪ್ತಿಯ ಎಲ್ಲಾ ಪಕ್ಷಗಳ ಮುಖಂಡರನ್ನು ಆಹ್ವಾನಿಸಿ ನೀಡುವಂತೆ ಸೂಚಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿಗಳಾದ ರಿಷಿ ಆನಂದ್, ಅಜಯ್, ಚುನಾವಣಾ ಶಿರಸ್ತೇದಾರ ಎನ್. ನರಸಿಂಹರಾಜು, ತಹಶೀಲ್ದಾರರು, ಇಆರ್‍ಓ, ಇಒ, ಎಇಆರ್‍ಓ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

(Visited 5 times, 1 visits today)