ತುಮಕೂರು


ನಗರದ ಮಲ್ಲಸಂದ್ರ ವಿಶ್ವಭಾರತಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಸತಿ ನಿಲಯದಲ್ಲಿ 48 ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿಯ ಪುತ್ರ ಹಲ್ಲೆ ನಡೆಸಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಚಿಕಿತ್ಸಾ ವೆಚ್ಚವನ್ನು ವಸತಿ ಶಾಲೆಯ ಆಡಳಿತ ಮಂಡಳಿಯೇ ಭರಿಸಬೇಕು. ಆರೋಪಿ ಭರತ್‍ನನ್ನು ಕೂಡಲೇ ಬಂಧಿಸಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಶನ್ ತುಮಕೂರು ಜಿಲ್ಲಾಧ್ಯಕ್ಷ ಈ.ಶಿವಣ್ಣ ಒತ್ತಾಯಿಸಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಲಕ್ಷ್ಮಣ್ ಎಂಬ ವಿದ್ಯಾರ್ಥಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಆತನ ಕೈಯನ್ನು ಮುರಿದು ಹಾಕಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಘವೇಂದ್ರ ಎಂಬ ವಿದ್ಯಾರ್ಥಿಗೆ ಕಾಲು ಕೈ ಎರಡನ್ನೂ ಮುರಿದು ಹಾಕಲಾಗಿದೆ. ನಿಖಿಲ್ ಏಳನೇ ತರಗತಿ ವಿದ್ಯಾರ್ಥಿ ಸೊಂಟ ಮುರಿಯಲಾಗಿದೆ. ಚಿಕ್ಕ ಮಕ್ಕಳ ಮೇಲಿನ ಈ ರೀತಿಯ ಹಲ್ಲೆ ಅತ್ಯಂತ ಅಮಾನವೀಯ ಸಂಗತಿಯಾಗಿದೆ.
ವಸತಿ ಶಾಲೆಯಲ್ಲಿ ಒಟ್ಟು 48 ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿಯ ಕಾರ್ಯದರ್ಶಿ ಪುತ್ರ ಭರತ್ ಹಲ್ಲೆ ನಡೆಸಿದ್ದಾನೆ. ಈ ಘಟನೆಯ ಹಿನ್ನೆಲೆಯಲ್ಲಿ ಪೋಷಕರು ಭಯಭೀತರಾಗಿ ದೂರದ ಊರುಗಳಿಂದ ಬಂದು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಹೊರಗಿನ ವ್ಯಕ್ತಿಗಳಿಗೆ ಮಾಹಿತಿ ನೀಡದಂತೆ ಕಳೆದ ಮೂರು ದಿನಗಳಿಂದ ಆಡಳಿತ ಮಂಡಳಿ ಮತ್ತು ರೌಡಿಗಳಿಂದ ಧಮ್ಕಿ ಹಾಕಿಸಿದ್ದಾರೆ. ಇದನ್ನು ಭಾರತ ವಿದ್ಯಾರ್ಥಿ ಫೆಡರೇಷನ್ ಖಂಡಿಸುತ್ತದೆ.
ಘಟನೆಯ ಹಿನ್ನೆಲೆಯಲ್ಲಿ ಎಸ್.ಎಫ್.ಐ ನಿಯೋಗವು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಚಿಕಿತ್ಸೆ ಕೊಡಿಸಲಾಯಿತು.
ಈ ವಿಷಯ ತಿಳಿಯುತ್ತಿದ್ದಂತೆ ಭರತ್ ತಲೆಮರೆಸಿಕೊಂಡಿದ್ದಾನೆ. ಭಯಭೀತರಾದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಎಲ್ಲಾ ವಿದ್ಯಾರ್ಥಿಗಳು ವರ್ಗಾವಣೆ ಪ್ರಮಾಣ ಪತ್ರ ತೆಗೆದುಕೊಂಡು ಹೋಗುತ್ತಿದ್ದು, ಆ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಅವರವರ ಸ್ಥಳದಲ್ಲಿಯೇ ಪ್ರವೇಶ ಕಲ್ಪಿಸಬೇಕೆಂದು ರಾಜ್ಯ ಸರ್ಕಾರವನ್ನು ಎಸ್.ಎಫ್.ಐ ಒತ್ತಾಯಿಸಿದೆ. ಈ ಘಟನೆಯು ಜಿಲ್ಲೆಯ ಶಿಕ್ಷಣ ಇಲಾಖೆಗೆ ಕಪ್ಪು ಚುಕ್ಕೆಯಾಗಿದ್ದು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಒತ್ತಾಯಿಸುತ್ತದೆ.
ವಿದ್ಯಾರ್ಥಿ ಮತ್ತು ಪೋಷಕರಲ್ಲಿ ಎಸ್‍ಎಫ್‍ಐ ನಿಯೋಗವು ಮಾತುಕತೆ ನಡೆಸಿ ಧೈರ್ಯದಿಂದ ಇರಲು ಮನವಿ ಮಾಡಿತು. ಮತ್ತು ಮುಂದಿನ ವಿದ್ಯಾಭ್ಯಾಸಕ್ಕೆ ಎಸ್‍ಎಫ್‍ಐ ಸಹಕಾರ ನೀಡಲಿದೆ. ಯಾವುದೇ ವಿದ್ಯಾರ್ಥಿಗೆ ತೊಂದರೆಯಾಗದಂತೆ ವಿದ್ಯಾರ್ಥಿಗಳ ಜೊತೆಗೆ ಸಂಘಟನೆ ಇರುತ್ತದೆ. ಆರೋಪಿಯ ಮೇಲೆ ಪ್ರಕರಣ ದಾಖಲಿಸಲಾಗಿದ್ದು ಆದರೂ ಆರೋಪಿಯನ್ನು ಇದುವರೆಗೂ ಬಂಧಿಸಿಲ್ಲ. ಕೂಡಲೇ ಬಂಧಿಸಿ ವಿಚಾರಣೆಗೊಳಪಡಿಸಬೇಕೆಂದು ಎಸ್.ಎಫ್.ಐ ಆಗ್ರಹಿಸುತ್ತದೆ.
ನಿಯೋಗದಲ್ಲಿ ನಗರ ಅಧ್ಯಕ್ಷ ಶಶಿ ವರ್ಧನ್, ಸಿಂಚನ, ಚಂದ್ರಿಕಾ, ನಿಂಗಾ ನಾಯ್ಕ್, ಕುಬೇರ್ ನಾಯ್ಕ್, ರಾಜಾ ನಾಯ್ಕ್ ಇದ್ದರು.

(Visited 2 times, 1 visits today)