ತುಮಕೂರು
ಆರಂಭದ ಹಂತದಲ್ಲಿಯೇ ಅನಾರೋಗ್ಯದ ಸಮಸ್ಯೆಗಳನ್ನು ತಪಾಸಣೆ ಮಾಡಿಸಿಕೊಂಡರೆ ಖರ್ಚು ಕಡಿಮೆ ಮಾಡಿಕೊಳ್ಳಬಹುದು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಸಲಹೆ ನೀಡಿದರು.
ಜಿಲ್ಲಾ ಒಕ್ಕಲಿಗರ ಒಕ್ಕೂಟ, ವಿಜಯ ಆಸ್ಪತ್ರೆ, ಪದ್ಮಶ್ರೀ ಡಯಾಗ್ನಾಸ್ಟಿಕ್ ಸೆಂಟರ್ ಇವರ ಸಂಯುಕ್ತಾಶ್ರಯದಲ್ಲಿ ಎಂ.ಜಿ.ರಸ್ತೆಯಲ್ಲಿರುವ ಪದ್ಮಶ್ರೀ ಡಯಾಗ್ನಾಸ್ಟಿಕ್ ಸೆಂಟರ್‍ನಲ್ಲಿ ಆರೋಗ್ಯ ಮಹಿಳೆ ವಿಶೇಷ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದÀರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಜಾಪ್ರಗತಿ ಸಂಪಾದಕರೂ ಆದ ಎಸ್.ನಾಗಣ್ಣ ಮಾತನಾಡಿ ಮನುಷ್ಯನ ಜೀವನಶೈಲಿ ದಿನೆ ದಿನೆ ಬದಲಾಗುತ್ತಿರುವುದರಿಂದ ಬಹುತೇಕ ಮಂದಿಯ ಬದುಕು ಔಷಧಿಯ ಮೇಲೆ ನಿಂತಿದೆ ಎಂದು ಅಭಿಪ್ರಾಯಪಟ್ಟರು.
ಆಹಾರದಿಂದಾಗಿಯೇ ನಮ್ಮ ಜೀವನಶೈಲಿ ಬದಲಾಗುತ್ತಿದೆ. ಅನಾರೋಗ್ಯ ಹೆಚ್ಚುತ್ತಿದೆ. ಔಷಧಗಳಿಂದಾಗಿ ಕಾಯಿಲೆಗಳು ನಿವಾರಣೆಯಾಗುತ್ತಿವೆ. ಮರಣ ಪ್ರಮಾಣವೂ ಕಡಿಮೆಯಾಗಿದೆ. ಆದರೆ ಅನಾರೋಗ್ಯಗಳು ಹೆಚ್ಚುತ್ತಿದ್ದು, ಆರೋಗ್ಯ ಕ್ಷೇತ್ರದ ಸುಧಾರಣೆಯ ಕಡೆಗೆ ಸರ್ಕಾರಗಳು, ಸಂಘ ಸಂಸ್ಥೆಗಳು ಹೆಚ್ಚು ಗಮನ ಹರಿಸಬೇಕಾಗಿದೆ ಎಂದರು.
ವಿಜಯ ಆಸ್ಪತ್ರೆಯ ಡಾ.ವಿಜಯಕುಮಾರ್ ಮಾತನಾಡಿ ಇಂದಿನ ದಿನಗಳಲ್ಲಿ ಕ್ಯಾನ್ಸರ್ ಹೆಚ್ಚು ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಸ್ತನದ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಬಾಯಿ ಕ್ಯಾನ್ಸರ್ ಹೀಗೆ ಪ್ರಮುಖವಾಗಿ ಕೆಲವು ಕ್ಯಾನ್ಸರ್ ಕಾಯಿಲೆಗಳನ್ನು ಗುರುತಿಸಬಹುದು. ಆರಂಭಿಕ ಹಂತದಲ್ಲಿಯೇ ಇವುಗಳನ್ನು ಗುರುತಿಸಿದರೆ ಶೇ.95 ರಷ್ಟು ಕಾಯಿಲೆಗಳನ್ನು ಗುಣಪಡಿಸಬಹುದು. ದುರಂತವೆಂದರೆ, ಎಲ್ಲರೂ ರೋಗ ಉಲ್ಬಣಿಸಿದಾಗಲೇ ಆಸ್ಪತ್ರೆಗಳ ಕಡೆಗೆ ಬರುತ್ತಾರೆ. ಇದನ್ನು ಮನಗಂಡು ನವೆಂಬರ್‍ನಿಂದ ಡಿಸೆಂಬರ್ ತಿಂಗಳವರೆಗೆ ಮಹಿಳೆಯರಿಗಾಗಿ ಉಚಿತ ತಪಾಸಣಾ ಕಾರ್ಯಕ್ರಮವನ್ನು ಇತರೆ ಆಸ್ಪತ್ರೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಂಗಪ್ಪ, ಡಿ.ಆರ್.ಕೇಶವಮೂರ್ತಿ, ಗಿರೀಶ್, ನಟೇಶ್, ಸುಜಾತ ನಂಜೇಗೌಡ, ರಂಗಮಣಿ ಕಾಮೇಶ್, ಕೃಷ್ಣಯ್ಯ, ಬೋರೇಗೌಡ, ಜಿ.ಕೆ.ಶ್ರೀನಿವಾಸ್ ಮೊದಲಾದವರು ಉಪಸ್ಥಿತರಿದ್ದರು.