ತುಮಕೂರು
ದೈನಂದಿನ ಜೀವನದಲ್ಲಿ ಆರೋಗ್ಯ ಕಾಳಜಿಯೂ ಕೂಡ ಒಂದು ಕರ್ತವ್ಯದಂತೆ ಭಾವಿಸಿದರೆ ಬಹುಪಾಲು ಆರೋಗ್ಯ ಸಮಸ್ಯೆಗಳಿಂದ ಹೊರ ಬರಬಹುದು ಎಂದು ಸಿದ್ಧಗಂಗಾ ಆಸ್ಪತ್ರೆ ನಿರ್ದೇಶಕ ಡಾ.ಎಸ್.ಪರಮೇಶ್ ತಿಳಿಸಿದರು.
ಅವರು ಸಿದ್ಧಗಂಗಾ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ಹಾಗೂ ರಕ್ತ ಪರೀಕ್ಷಾ ಘಟಕಕ್ಕೆ ಉದ್ಘಾಟನೆಯಲ್ಲಿ ಪಾಲ್ಗೊಂಡು ಮಾತನಾಡಿ 30 ರಿಂದ 40 ವರ್ಷ ದಾಟಿದ ಪ್ರತಿಯೊಬ್ಬ ವ್ಯಕ್ತಿಯೂ ವರ್ಷಕ್ಕೆ ಎರಡು ಬಾರಿಯಾದರೂ ಆರೋಗ್ಯ ಪರೀಕ್ಷೆಗೆ ಒಳಗಾಗಬೇಕು.ಜೊತೆಗೆ ತನ್ನ ಕುಟುಂಬದ ಇತರರಿಗೂ ಆರೋಗ್ಯ ಪರೀಕ್ಷೆಗೆ ಮುಂದಾಗುವಂತೆ ಪ್ರೇರೇಪಿಸಿ ಸ್ವಸ್ಥ ಕುಟುಂಬವನ್ನು ನಿರ್ಮಿಸಿಕೊಳ್ಳಬೇಕು ಎಂದರು.
ಮಹಾನಗರ ಪಾಲಿಕೆ ಮೇಯರ್ ಪ್ರಭಾವತಿ ಸುಧೀಶ್ವರ್ ಮಾತನಾಡಿ ಬಸ್ ನಿಲ್ದಾಣದ ಬಳಿಯೇ ಸಿದ್ಧಗಂಗಾ ಆಸ್ಪತ್ರೆ ನಗರ ಆರೋಗ್ಯದ ಕೇಂದ್ರದ ಮೂಲಕ ಜನರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ. ಪೌರಕಾರ್ಮಿಕರಿಗೆ ಹಾಗೂ ವಾರ್ಡ್‍ವಾರು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮೂಲಕ ಆರೋಗ್ಯದ ಅರಿವು ಮೂಡಿಸುತ್ತಿದ್ದಾರೆ ಎಂದರು.
ಮಹಾನಗರ ಪಾಲಿಕೆ ಸದಸ್ಯ ಸಯ್ಯದ್ ನಯಾಜ್ ಮಾತನಾಡಿ ಸಿದ್ಧಗಂಗಾ ಶ್ರೀಗಳು ಎಲ್ಲಾ ಜನರಿಗೆ ಉಚಿತ ಆರೋಗ್ಯ ದಾಸೋಹ ನೀಡಬೇಕು ಎಂದು ತೆರೆದಿರುವ ನಗರ ಆರೋಗ್ಯ ಕೇಂದ್ರ ಸುಸ್ಸಜ್ಜಿತವಾಗಿದ್ದು ಇಲ್ಲಿಯೆ ಉಚಿತ ಬಿಪಿ ಶುಗರ್, ರಕ್ತ ಪರೀಕ್ಷೆ ಜೊತೆಗೆ ವೈದ್ಯರ ಸಂದರ್ಶನ ಕೂಡ ನೀಡುತ್ತಿರುವುದು ಸಾರ್ವಜನಿಕರಿಗೆ ಅನುಕೂಲವಾಗುತ್ತಿದೆ ಎಂದರು.
ಪಾಲಿಕೆಯ ಸಹಯೋಗದಲ್ಲಿ ಡಿಸೆಂಬರ್ 1 ರಿಂದ 30 ರವರೆಗೆ ಬೆಳಗ್ಗೆ 10 ರಿಂದ 1 ಗಂಟೆಯವರೆಗೆ ನಗರ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಯುತ್ತಿದ್ದು ಸಾರ್ವಜನಿಕರು ಉಪಯೋಗಿಸಿಕೊಳ್ಳಬೇಕು ಎಂದು ಕರೆನೀಡಿದರು.
ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ.ಶಾಲಿನಿ.ಎಂ, ಮಡಿಕಲ್ ಕಾಲೇಜು ಮೇಲ್ವಿಚಾರಕ ಡಾ.ನಿರಂಜನಮೂರ್ತಿ, ಪಾಲಿಕೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾದ ನೂರು ಉನ್ನೀಸಾ ಉಬೇದುಲ್ಲಾ, ನರ್ಸಿಂಗ್ ವಿಭಾಗದ ಮುಖ್ಯಸ್ಥರಾದ ನಾಗಣ್ಣ ಉಪಸ್ಥಿತರಿದ್ದರು.