ತುಮಕೂರು
ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪ್ರಕಟಣೆ -2023 ಸಂಬಂಧ ನವೆಂಬರ್ 9, 2022ರಿಂದ ಡಿಸೆಂಬರ್ 8, 2022 ರವರೆಗೆ ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರರು ಮತದಾರರಿಂದ ಸ್ವೀಕೃತಗೊಳ್ಳುವ ಎಲ್ಲ ಅರ್ಜಿ ನಮೂನೆಗಳನ್ನು ಪ್ರತಿನಿತ್ಯ ಪರಿಶೀಲಿಸಿ ಇತ್ಯರ್ಥಗೊಳಿಸಬೇಕು ಮತ್ತು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುವಂತೆ ತುಮಕೂರು ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರೂ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಕಾರ್ಯದರ್ಶಿಗಳೂ ಆದ ಪಂಕಜ್‍ಕುಮಾರ್‍ಪಾಂಡೆ(ಐಎಎಸ್) ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರಿಂದು ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಇಂದು ನಡೆದ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪ್ರಕಟಣೆ -2023ರ ಸಂಬಂಧ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನ್ನಾಡುತ್ತಾ, ದೋಷರಹಿತ ಮತದಾರರ ಪಟ್ಟಿ ಸಿದ್ದತೆಗೆ ಆದ್ಯತೆ ನೀಡಬೇಕು. ತುಮಕೂರು ಜಿಲ್ಲೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರು ಬರಬಾರದು.ಚುನವಣಾ ಅಯೋಗದ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಯಾವುದೇ ಅನುಮಾನ ಅಥವಾ ಗೊಂದಲಗಳಿದ್ದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳೂ ಆದಂತಹ ಜಿಲಾಧಿಕಾರಿಗಳನ್ನು ಸಂಪರ್ಕಿಸುವಂತೆ ಸೂಚಿಸಿದರು.
18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯದಂತೆ ಕ್ರಮವಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಮತ್ತು ಈ ತಿಂಗಳ 3 ಹಾಗೂ 4ರಂದು ವಿಶೇಷ ಆಂದೋಲನ ಕಾರ್ಯಕ್ರಮ ನಡೆಯಲಿದ್ದು, ಬಿಎಲ್‍ಓಗಳು ಮತಗಟ್ಟೆ ಪ್ರದೇಶದಲ್ಲಿ ಹಾಜರಿದ್ದು, ಮತದಾರರಿಗೆ ಅಗತ್ಯ ಮಾಹಿತಿಯನ್ನು ನೀಡಬೇಕು ಮತ್ತು ಶೇ.100ರಷ್ಟು ಮನೆ-ಮನೆ ಭೇಟಿ ಕಾರ್ಯಕ್ರಮ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.
ಸಾರ್ವಜನಿಕರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸ್ವೀಕರಿಸಲು ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿದ್ದು, ಈ ಅವಧಿಯಲ್ಲಿ ಮತದಾರರಿಂದ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಕೈ ಬಿಡತಕ್ಕವುಗಳ ಬಗ್ಗೆ ಹೆಚ್ಚಿನ ಅರ್ಜಿಗಳು ಹರಿದು ಬರುವ ಕಾರಣ ಈಗಾಗಲೇ ಸ್ವೀಕೃತಗೊಂಡಿರುವ ಅರ್ಜಿ ನಮೂನೆಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಗೊಳಿಸುವಂತೆ ಸೂಚಿಸಿದರು.
ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಮತದಾರರ ಪಟ್ಟಿ ವೀಕ್ಷಕರಾದ ಶ್ರೀ ಪಂಕಜ್‍ಕುಮಾರ್‍ಪಾಂಡೆ ಅವರಿಗೆ ಜಿಲ್ಲೆಯ ಕುರಿತು ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ 11 ವಿಧಾನಸಭಾ ಕ್ಷೇತ್ರವಿದ್ದು, ಒಟ್ಟು 2798935 ಜನಸಂಖ್ಯೆಯಿರುತ್ತದೆ. 9-11-2022ರ ಕರಡು ಮತದಾರರ ಪಟ್ಟಿಯನ್ವಯ ಜಿಲ್ಲೆಯಲ್ಲಿ 2162613 ಮತದಾರರಿದ್ದು, ಈ ಪೈಕಿ 1082752 ಪುರುಷ ಹಾಗೂ 1079769 ಮಹಿಳಾ ಮತದಾರಿದ್ದಾರೆ. ಜಿಲ್ಲೆಯಲ್ಲಿ ಇಪಿ ರೇಷಿಯೋ 77.27 ಇರುತ್ತದೆ. ಜೆಂಡರ್ ರೇಷಿಯೋ 997 ಇರುತ್ತದೆ ಎಂದು ವಿವರಿಸಿದರು.
ಜಿಲ್ಲೆಯಲ್ಲಿ ಒಟ್ಟು 30165 ಯುವ ಮತದಾರರನ್ನು ಮತದಾರರ ಪಟ್ಟಿಗೆ ನೋಂದಣಿ ಮಾಡಲಾಗಿದ್ದು, ಅಂತೆಯೇ ನವೆಂಬರ್ 12 ಹಾಗೂ 20ರಂದು ನಡೆಸಲಾದ ವಿಶೇಷ ಆಂದೋಲನ ಹಿನ್ನೆಲೆಯಲ್ಲಿ 18 ರಿಂದ 19 ವಯೋಮಾನದ 8404 ಮತ್ತು 20 ವರ್ಷ ಮೇಲ್ಪಟ್ಟ 4279 ಒಟ್ಟು 12683 ನಮೂನೆ-6 ಸ್ವೀಕೃತವಾಗಿದ್ದು, ಒಟ್ಟು 6591 ನಮೂನೆ-7 ಮತ್ತು 2511 ನಮೂನೆ-8 ಸ್ವೀಕೃತಗೊಂಡಿರುತ್ತವೆ. ಜಿಲ್ಲೆಯಲ್ಲಿ ಒಟ್ಟು 26948 ವಿಶೇಷಚೇತನ ಮತದಾರರಿರುತ್ತಾರೆ ಎಂದು ತಿಳಿಸಿದರು.
ಮಾಧ್ಯಮಗಳ ಮೂಲಕ ಡಿಇಓ, ಇಆರ್‍ಓ ಮತ್ತು ಎಇಆರ್‍ಓಗಳು ವೋಟರ್ ಹೆಲ್ಫ್‍ಲೈನ್ ಆಪ್ ಕುರಿತು ವ್ಯಾಪಕ ಪ್ರಚಾರ ನೀಡಿದ್ದು, ಬಿಎಲ್‍ಓ ಮತ್ತು ಬಿಎಲ್‍ಓ ಸೂಪರ್‍ವೈಸರ್‍ಗಳ ಮೂಲಕ ಆನ್‍ಲೈನ್ ಮೂಲಕ ನಮೂನೆಗಳನ್ನು ಭರ್ತಿ ಮಾಡುವ ಕುರಿತು ಮತದಾರರಿಗೆ ಅರಿವು ಮೂಡಿಸಲಾಗಿದೆ. ರಾಜಕೀಯ ಪಕ್ಷಗಳ ಸಭೆಗಳನ್ನು ಕರೆದು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಜಾಗೃತಿ ಮೂಡಿಸುವಂತೆ ಕೋರಲಾಗಿದೆ ಮತ್ತು ಪ್ರತಿವಾರ ಪರಿಷ್ಕರಣೆ ಕುರಿತು ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಲಾಗಿದೆ. ಸ್ವೀಪ್ ಚಟುವಟಿಕೆಗಳ ಮೂಲಕ ಪಿಯು ಮತ್ತು ಡಿಗ್ರಿ ಕಾಲೇಜುಗಳಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಕುರಿತು ಅರಿವು ಮೂಡಿಸಲಾಗಿದೆ. ಜಿಲ್ಲಾಡಳಿತದ ವತಿಯಿಂದ ಜಾಥಾವನ್ನೂ ಸಹ ಕೈಗೊಳ್ಳಲಾಗಿದೆ, ಒಟ್ಟು 2683 ಮತಗಟ್ಟೆಗಳಲ್ಲಿ 2683 ಬಿಎಲ್‍ಓಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿಗಳಾದ ಅಜಯ್, ಕಲ್ಪಶ್ರೀ, ರಿಷಿ ಆನಂದ್ ಸೇರಿದಂತೆ ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.