ಕೊರಟಗೆರೆ
ಬಯಲುಸೀಮೆ ಕ್ಷೇತ್ರಗಳಾದ ಕೊರಟಗೆರೆ, ಮಧುಗಿರಿ ಮತ್ತು ಪಾವಗಡ ಕ್ಷೇತ್ರಗಳು ಅಭಿವೃದ್ದಿ ವಂಚಿತವಾಗಿ ಹೀನಾಯ ಪರಿಸ್ಥಿತಿಗೆ ತಲುಪಿವೆ. ನಾನು ಅಧಿಕಾರಕ್ಕೆ ಬಂದರೆ ಬಯಲುಸೀಮೆ ಗಡಿಜಿಲ್ಲೆಗಳ ಅಭಿವೃದ್ದಿಗೆ ಪ್ರತಿವರ್ಷ 1ಸಾವಿರ ಕೋಟಿ ಅನುಧಾನ ಮೀಸಲು ಇಡುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಚನ್ನರಾಯನದುರ್ಗ ಹೋಬಳಿ ತೋವಿನಕೆರೆ ಗ್ರಾಪಂ ಕೇಂದ್ರಸ್ಥಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ಪಂಚರತ್ನ ಯೋಜನೆಯ ರಥಯಾತ್ರೆ, ರೈತರ ಜೊತೆ ಸಂವಾದ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮದ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ರಾಜಧಾನಿಯಿಂದ ಗಡಿಜಿಲ್ಲೆಯ 3ಕ್ಷೇತ್ರಗಳು ಕೇವಲ 70ಕೀಮೀ ಅಂತರದಲ್ಲಿವೆ. ಅಭಿವೃದ್ದಿ ಕಾಣದೇ ಗ್ರಾಮೀಣ ಪ್ರದೇಶಗಳು ತುಂಬಾ ಹಿಂದುಳಿದಿವೆ. ಗಡಿ ಗ್ರಾಮಗಳ ಬಡಜನರ ನೋವು ಆಲಿಸುವ ನಾಯಕರು ನಮಗೆ ಅವಶ್ಯಕತೆ ಇದೆ. ಕೊರಟಗೆರೆಯ ಪ್ರವಾಸದ ವೇಳೆ ವಿದ್ಯಾರ್ಥಿನಿಯಿಂದ ನನಗೇ ಜ್ಞಾನೋದಯ ಆಗಿದೆ. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೇ ಗಡಿಭಾಗದ ನಾಲ್ಕೈದು ಜಿಲ್ಲೆಗಳಿಗೆ ಪ್ರತಿವರ್ಷ 1ಸಾವಿರ ಕೋಟಿ ಅನುಧಾನ ಬಿಡುಗಡೆ ಮಾಡುತ್ತೇನೆ ಎಂದರು.
ಗೊಲ್ಲರಹಟ್ಟಿಯ ಹೆಣ್ಣುಮಗುವಿನ ಶೈಕ್ಷಣಿಕ ವ್ಯಾಸಂಗದ ವೇದನೆಯ ನೋವಿನ ಮಾತಿನಿಂದ ನನಗೇ ಜ್ಞಾನೋದಯ ಆಗಿದೆ. ಕಾಟಚಾರಕ್ಕೆ ಮಾತ್ರ ಸರಕಾರ ವಿದ್ಯಾರ್ಥಿಗಳಿಗೆ ಬಸ್‍ಪಾಸ್ ನೀಡಿದೆ, ಆದರೇ ಗ್ರಾಮೀಣ ಭಾಗಕ್ಕೆ ಸರಕಾರಿ ಬಸ್ಸಿನ ವ್ಯವಸ್ಥೆಯೇ ಇಲ್ಲ. ಕೊರಟಗೆರೆ ಕ್ಷೇತ್ರದಲ್ಲಿ ಸೇತುವೆ ಮತ್ತು ರಸ್ತೆಗಳು ನಾಶವಾಗಿ ಸುಗಮ ಸಂಚಾರಕ್ಕೆ ರೈತರಿಗೆ ಸಮಸ್ಯೆ ಎದುರಾಗಿದೆ. ರಥಯಾತ್ರೆಯ ವೇಳೆ 50ರಿಂದ 60ಹಳ್ಳಿಯ ಜನತೆ ಸಮಸ್ಯೆಗಳ ಸರಮಾಲೆಯನ್ನೇ ನನಗೇ ಮನವರಿಕೆ ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯದರ್ಶಿ ಮಹಾಲಿಂಗಪ್ಪ, ಕೊರಟಗೆರೆ ಕಾರ್ಯಧ್ಯಕ್ಷ ನರಸಿಂಹರಾಜು, ತೋವಿನಕೆರೆ ಗ್ರಾಪಂ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷೆ ನರಸಮ್ಮ, ಮುಖಂಡರಾದ ವೆಂಕಟೇಶ್, ಶ್ರೀನಿವಾಸ್, ವಿಜಯಕುಮಾರ್, ಶ್ರೀಧರ್, ರಂಗೇಗೌಡ, ರಮೇಶ್, ಅರುಣ್, ಸುರೇಶ್, ಮಧು, ಸುಜಾತರಮೇಶ್, ಸೇರಿದಂತೆ ಇತರರು ಇದ್ದರು.