ತುಮಕೂರು
ಸ್ವಯಂ ರಕ್ಷಣೆಯ ಕಲೆಯಾಗಿರುವ ಕರಾಟೆ ಕ್ರೀಡೆಯಲ್ಲಿ ನಮ್ಮ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕ್ರೀಡಾ ಪ್ರೋತ್ಸಾಹಕರ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಕರಾಟೆ ಅಸೋಸಿಯೇಷನ್ ಅಧ್ಯಕ್ಷ ಚಂಗಪ್ಪ ತಿಳಿಸಿದ್ದಾರೆ.
ನಗರದ ತುಮಕೂರು ವಿವಿಯ ಡಾ.ಶ್ರೀಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಲಯನ್ಸ್ ಮಾರ್ಷಲ್ ಆರ್ಟ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಂಡಿದ್ದ 6ನೇ ರಾಷ್ಟ್ರೀಯ ಮುಕ್ತ ಅಹ್ವಾನಿತ ಕರಾಟೆ ಚಾಂಪಿಯನ್ ಶಿಫ್-2022 ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ತುಮಕೂರು ಕರಾಟೆ ಅಸೋಸಿಯೇಷನ್ ಅಧ್ಯಕ್ಷರು ಆಗಿರುವ ಸಿ.ಜಿ.ಪ್ರಕಾಶ್ ಅವರು ನಿರಂತರವಾಗಿ ಹಲವು ವರ್ಷಗಳಿಂದ ಇಂತಹ ಟೂರ್ನಿಗಳನ್ನು ನಡೆಸಿಕೊಂಡು ಬರುತಿದ್ದಾರೆ. ಇಂತಹವರಿಗೆ ಕ್ರೀಡಾಭಿಮಾನಿಗಳು ಪ್ರೋತ್ಸಾಹ ನೀಡಿದರೆ ಇನ್ನೂ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸ ಬಹುದಾಗಿದೆ ಎಂದರು.
ಕ್ರೀಡಾ ಪ್ರೋತ್ಸಾಹಕ ಮತ್ತು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ಲಯನ್ಸ್ ಮಾರ್ಷಲ್ ಆರ್ಟ್ ಕರಾಟೆ ಅಸೋಸಿಯೇಷನ್‍ನ ಪ್ರಕಾಶ್ ನಿರಂತರವಾಗಿ ತುಮಕೂರು ನಗರದಲ್ಲಿ ರಾಷ್ಟ್ರಮಟ್ಟದ ಕರಾಟೆ ಟೂರ್ನಮೆಂಟ್ ಆಯೋಜಿಸುತ್ತಾ ಬಂದಿದ್ದಾರೆ.ಇವರ ಬಳಿ ಸುಮಾರು 3500-4000 ವಿದ್ಯಾರ್ಥಿಗಳು ಕರಾಟೆ ಕಲೆ ಕಲಿಯುತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕರಾಟೆ ಕ್ರೀಡೆಯಾಗಿಯೂ ಹೆಚ್ಚು ಪ್ರಚಾರ ಪಡೆದುಕೊಳ್ಳುತ್ತಿದೆ.ಆದರೆ ಮಕ್ಕಳಿಗೆ ನಿರಂತರ ಅಭ್ಯಾಸ ಮಾಡಲು ಸೂಕ್ತ ಸ್ಥಳವಿಲ್ಲ.ಬಾಡಿಗೆ ಕಟ್ಟಡದಲ್ಲಿ ತರಗತಿಗಳನ್ನು ನಡೆಸುತ್ತಿದ್ದು,ಜಿಲ್ಲಾಡಳಿತ,ಶಾಸಕರು ಹಾಗೂ ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆ ನೂತನವಾಗಿ ನಿರ್ಮಾಣಗೊಂಡಿರುವ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಒಂದು ಕೊಠಡಿಯನ್ನು ನೀಡಿದರೆ,ಇನ್ನೂ ಹೆಚ್ಚಿನ ಮಕ್ಕಳಿಗೆ ತರಬೇತಿ ನೀಡಿ,ಅವರನ್ನು ರಾಷ್ಟ್ರೀಯ,ಅಂತರರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ.ಹಾಗಾಗಿ ಜಿಲ್ಲಾಡಳಿತ ಈ
ನಿಟ್ಟಿನಲ್ಲಿ ಸಹಕಾರ ನೀಡಬೇಕೆಂದು ಒತ್ತಾಯಿಸಿದರು.
ಹಿರಿಯ ಕರಾಟೆ ಪಟು,ಬ್ಲಾಕ್ ಬೆಲ್ಟ್ ವಿಜೇತ,ಅಂಬೇಡ್ಕರ್ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಂಜುನಾಥ್ ಮಾತನಾಡಿ,ಕರಾಟೆ ಭಾರತೀಯರ ಪುರಾತನ ಕಲೆ.ಇದು ಮನುಷ್ಯನ ಸ್ವಯಂ ರಕ್ಷಣೆಯ ಜೊತೆಗೆ,ಆತ್ಮಸ್ಥೈರ್ಯವನ್ನು ಒದಗಿಸುತ್ತದೆ.ಇಂತಹ ಕ್ರೀಡೆ ಇತರೆ ಆಟೋಟಗಳಂತೆ ಮುನ್ನೆಲೆಗೆ ಬರಬೇಕಾದರೆ ಪ್ರೋತ್ಸಾಹಕರ ಬೆಂಬಲ ಅಗತ್ಯವಾಗಿದೆ. ತುಮಕೂರಿನಂತಹ ನಗರದಲ್ಲಿಯೂ ರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಫ್ ಆಯೋಜಿಸುತ್ತಿರುವುದು ಸಂತೋಷದ ವಿಚಾರ ಎಂದರು.
ಕರಾಟೆ ಆತ್ಮರಕ್ಷಣೆಯ ಕಲೆಯ ಜೊತೆಗೆ, ಕ್ರೀಡೆ ಎಂದು ಗುರುತಿಸಲ್ಪಟ್ಟ ನಂತರ ರಾಷ್ಟ್ರೀಯ ಮಟ್ಟದಲ್ಲಿ ಬ್ಲಾಕ್‍ಬೆಲ್ಟ್ ಗಳಿಸಿದವರೆಗೆ ರಕ್ಷಣಾ ಇಲಾಖೆ,ರೈಲ್ವೆ ಇಲಾಖೆ, ಪೊಲೀಸ್ ಇಲಾಖೆಗಳಲ್ಲಿ ಉದ್ಯೋಗ ಪಡೆಯುತ್ತಿದ್ದಾರೆ.ಇನ್ನೂ ಹೆಚ್ಚಿನ ಪ್ರೋತ್ಸಾಹ ಸರಕಾರದಿಂದ ದೊರೆತರೆ ಮತಷ್ಟು ಸಧೃಡ ದೇಹ ಮತ್ತು ಮನಸ್ಸು ಉಳ್ಳ ಯುವಕರನ್ನು ರಕ್ಷಣಾ ಇಲಾಖೆಗೆ ಸೆಳೆಯಲು ಅವಕಾಶವಿದೆ. ಈ ನಿಟ್ಟಿನಲ್ಲಿ ಯುವಜನರು ಈ ಕ್ರೀಡೆಯನ್ನು ಮೈಗೂಡಿಸಿಕೊಳ್ಳಬೇಕೆಂದು ಸಿ.ಜಿ.ಪ್ರಕಾಶ್ ಸಲಹೆ ನೀಡಿದರು.
ಇದೇ ವೇಳೆ ಆರು ವರ್ಷದ ಕೆಳಗಿನ ಮಕ್ಕಳ ವಿಭಾಗದ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಟ್ರೋಫಿ, ಪದಕ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು. ವೇದಿಕೆಯಲ್ಲಿ ಟೂರ್ನಿಯ ಮುಖ್ಯ ತೀರ್ಪುಗಾರರಾದ ಕೆ.ಬಿ.ರಾಜ್,ಲಯನ್ಸ್ ಮಾರ್ಷಲ್ ಆಟ್ರ್ಸ ಅಸೋಸಿಯೇಷನ್‍ನ ಸುಮುಖ್,ರವಿತೇಜ್,ಕಾರ್ತಿಕ್,ವಿಜಯ್,ದರ್ಶನ್,ಗ್ರಿತೇಯ,ಸಿದ್ದಾರ್ಥ,ಸಂಸ್ಥೆಯ ವ್ಯವಸ್ಥಾಪಕ ರಾದ ಕಲ್ಪನ.ಹೆಚ್.ಎನ್.ಹಾಗೂ ಎಲ್ಲಾ ಅಧಿಕಾರಿಗಳು ಪಾಲ್ಗೊಂಡಿದ್ದರು.