ತುಮಕೂರು
ದೇಶದ ಎಲ್ಲಾ ವರ್ಗ, ಶೋಷಿತ ಸಮುದಾಯ ವರ್ಗದವರ ಧ್ವನಿಯಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಜ್ಞಾನದ ಬೆಳಕು-ಜ್ಯೋತಿಯನ್ನು ದೇಶವಾಸಿಗಳಿಗೆ ನೀಡಿದ ಮಹಾನ್ ಪುರುಷ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಬಣ್ಣಿಸಿದರು.
ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಇಂದು ಸಮಾನತೆಯ ಹರಿಕಾರ ಮತ್ತು ಮಹಾಮಾನವತಾವಾದಿ, ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರ 66ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ನಮಿಸಿ ಮಾತನಾಡುತ್ತಾ, ವಿಶ್ವಜ್ಞಾನಿ, ದಲಿತರ ಸೂರ್ಯರಂತೆ ಪ್ರಜ್ವಲಿಸಿದ ಅಂಬೇಡ್ಕರ್, ದೇಶ ವಿದೇಶಗಳಲ್ಲಿ ಪ್ರಖ್ಯಾತರಾಗಿದ್ದವರು. ಅವರೊಳಗೆ ದೇಶದ ಐಕ್ಯತೆ, ರಾಷ್ಟ್ರಪ್ರೇಮ, ಜಾಗೃತ ಜ್ಯೋತಿ ಇದ್ದು, ಸಮಾನತೆಯ ಹರಿಕಾರ, ಮೀಸಲಾತಿ ನೀಡಿಕೆಯ ಮಹಾತಪಸ್ವಿಯಾಗಿದ್ದರು. ಅವರ ಪುಸ್ತಕ ಭಂಡಾರದಲ್ಲಿ 50000ಕ್ಕೂ ಹೆಚ್ಚು ಪುಸ್ತಕ ಸಂಗ್ರಹವಿತ್ತು. ಸುಮಾರು 195 ದೇಶಗಳಲ್ಲಿ ಅವರು ಪ್ರಖ್ಯಾತರಾಗಿದ್ದವರು ಎಂದು ವೈ.ಹೆಚ್.ಹುಚ್ಚಯ್ಯ ವಿವರಿಸಿದರು.
ಸಂವಿಧಾನ ರಚನಾ ಸಭೆಯ ಕಾರ್ಯ ಚಟುವಟಿಕೆಗಳಲ್ಲಿ ರಾಷ್ಟ್ರೀಯತೆ, ಐಕ್ಯತೆ ಚೌಕಟ್ಟು ಮೀರಲಾಗದ ಹಾಗೆ ಎಚ್ಚರ ವಹಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್, ಅಖಂಡ ಭಾರತವೆಂಬುದು ಕೇವಲ ಕಲ್ಪನೆಯಲ್ಲ. ಭಾರತ ಪ್ರಕೃತಿ ದತ್ತವಾಗಿಯೇ ಅಖಂಡವಾಗಿದ್ದ ಭಾರತವನ್ನು ವಿಭಜಿಸುವುದು ಎಂದರೆ ವಿಭಾಗ ಮಾಡುವುದು ಎಂದಲ್ಲ. ಒಂದು ಭಾಗವನ್ನು ಕತ್ತರಿಸುವುದು ಎಂದೇ ಅಂಬೇಡ್ಕರ್ ನುಡಿದಿದ್ದರು ಎಂದು ಬಿಜೆಪಿ ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಎನ್.ನರಸಿಂಹಮೂರ್ತಿ ತಿಳಿಸಿದರು.
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್‍ರವರನ್ನು ಅಂದಿನ ಕಾಂಗ್ರೆಸ್ ನೇತೃತ್ವ ವಹಿಸಿದ್ದ ಜವಹರಲಾಲ್ ನೆಹರೂ ಅವಮಾನಿಸಿದ್ದರು, ಅಂಬೇಡ್ಕರ್ ಎರಡು ಬಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಕಾಂಗ್ರೆಸ್ ಸಾಮಾನ್ಯ ವ್ಯಕ್ತಿಯನ್ನು ಹುರಿಯಾಳಿಸಿ ಸೋಲನ್ನು ಅನುಭವಿಸುವಂತೆ ಮಾಡಿದರು. ಅವರು ಸಾವನಪ್ಪಿದಾಗ ದೆಹಲಿಯಲ್ಲಿ ದಫನ್ ಮಾಡಲೂ ಕಾಂಗ್ರೆಸ್ ಅವಕಾಶ ಮಾಡಿಕೊಡಲಿಲ್ಲ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ತುಮಕೂರು ನಗರ ಎಸ್.ಸಿ. ಮೋರ್ಚಾ ಅಧ್ಯಕ್ಷ ಹನುಮಂತರಾಯಪ್ಪ (ಹೆಚ್.ರಾಯಪ್ಪ) ಮಾತನಾಡುತ್ತಾ, ಅಂಬೇಡ್ಕರ್ ಅವರೊಳಗೆ ದೇಶ ಐಕ್ಯತೆ, ರಾಷ್ಟ್ರಪ್ರೇಮ ಜಾಗೃತ ಜ್ಯೋತಿ ಇತ್ತು. ಆ ಅದಮ್ಯ ಧ್ಯೇಯ ಸಾರ್ವತ್ರಿಕವಾಗಿತ್ತು. ಶೋಷಿತ ವರ್ಗದವರು ನಮ್ಮ ಉಸಿರ ಬಿಸಿ ತಗ್ಗಿದ್ದು ಅಂಬೇಡ್ಕರ್‍ರವರಿಂದಲೇ ಎಂಬ ಭಾವವನ್ನು ಇಂದಿಗೂ ಇರಿಸಿಕೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಹಿರಿಯ ಮುಖಂಡ ಹಾಗೂ ನಿವೃತ್ತ ಅಧಿಕಾರಿ ವಿಶ್ವನಾಥ್‍ಸ್ವಾಮಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ಎಸ್.ಸಿ.ಮೋರ್ಚಾ ಜಿಲ್ಲಾ ಪ್ರಧಾನಕಾರ್ಯದರ್ಶಿ ಬಿ.ಲೋಕೇಶ್, ಕಾರ್ಯದರ್ಶಿ ಮಧುವನಿತ, ಖಜಾಂಚಿ ಯೋಗೀಶ್‍ಸೋರೆಕುಂಟೆ, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ, ಟೂಡಾ ಸದಸ್ಯ ಹಾಗೂ ರೈತ ಮೋರ್ಚಾ ನಗರಾಧ್ಯಕ್ಷ ಸತ್ಯಮಂಗಲಜಗದೀಶ್, ಎಸ್.ಸಿ.ಮೋರ್ಚಾ ನಗರ ಉಪಾಧ್ಯಕ್ಷ ಸಿದ್ದಗಂಗಯ್ಯ, ಪ್ರಧಾನಕಾರ್ಯದರ್ಶಿ ಹನುಮಂತರಾಜು, ಎಸ್ ಶಿವರಾಜು, ಕಾರ್ಯಕಾರಿಣಿ ಸದಸ್ಯರಾದ ಎನ್.ಗಣೇಶ್, ಎನ್.ವಿ.ವೆಂಕಟೇಶ್, ಪಿ.ಗಿರೀಶ್, 19ನೇ ವಾರ್ಡ್ ಅಧ್ಯಕ್ಷ ಎಸ್.ರಾಮಚಂದ್ರರಾವ್ ಮುಂತಾದವರು ಭಾಗವಹಿಸಿದ್ದರು.
ಸಭೆಯಲ್ಲಿ ಎಸ್.ಸಿ.ಮೋರ್ಚಾ ಸಾಮಾಜಿಕ ಜಾಲತಾಣದ ಜಿಲ್ಲಾ ಸಂಚಾಲಕ್ ಹಾಗೂ ಟೂಡಾ ಮಾಜಿ ಸದಸ್ಯ ಟಿ.ಎಲ್.ಪ್ರತಾಪ್‍ಕುಮಾರ್ ಸ್ವಾತಿಸಿದರೆ, ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಬಿ.ಪಿ.ಆಂಜನಮೂರ್ತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.