ತುಮಕೂರು
ಭಾರತ ಚುನಾವಣಾ ಆಯೋಗದ ನಿರ್ದೇಶನದನ್ವಯ 18 ವರ್ಷ ಪೂರೈಸಿದ ಜಿಲ್ಲೆಯ ಎಲ್ಲಾ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಕಾಲೇಜು ಶಿಕ್ಷಣ ಸಂಸ್ಥೆಗಳಿಂದ ನಿಗಧಿತ ನಮೂನೆಯಲ್ಲಿ ವಿದ್ಯಾರ್ಥಿಗಳ ವಿವರವನ್ನು ಪಡೆದು ಕಳುಹಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ/ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ಸಂಬಂಧಪಟ್ಟ ಕಾಲೇಜು/ ಸಂಸ್ಥೆಯ ಹೆಸರು, ಸಹಿ ಮತ್ತು ಆಯಾ ಪ್ರಾಂಶುಪಾಲರ ಮೊಹರಿನೊಂದಿಗೆ ನಮೂನೆ 1 ರಲ್ಲಿ ಜ.01.2023ಕ್ಕೆ 18 ವರ್ಷ ತುಂಬುವ ಯುವಮತದಾರರ ಮಾಹಿತಿಯನ್ನು ಪಡೆಯುವುದು. ನಮೂನೆ-2ರಲ್ಲಿ ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರರು ಎಲ್ಲಾ ಕಾಲೇಜು/ಸಂಸ್ಥೆಗಳ ಮಾಹಿತಿಯನ್ನು ಕ್ರೋಢೀಕರಿಸಿ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಕಳುಹಿಸಿಕೊಡುವಂತೆ ಅವರು ಸೂಚಿಸಿದರು.
ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಬಹುತೇಕ ಕೆರೆಗಳು ತುಂಬಿದ್ದು, ನೀರು ಭರ್ತಿಯಾಗಿ ಒಡೆದು ಹೋಗುವಂತಹ ಅಪಾಯಕಾರಿ ಪರಿಸ್ಥಿತಿ ಇರುವಂತಹ ಕೆರೆಗಳ ಬಗ್ಗೆ ಪಿಡಿಓಗಳು ಸೇರಿದಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಪರಿಶೀಲಿಸಬೇಕು ಮತ್ತು ಅಂತಹ ಪ್ರಕರಣಗಳಿದ್ದಲ್ಲಿ ತಕ್ಷಣವೇ ಸಣ್ಣ ನೀರಾವರಿ, ಜಿಲ್ಲಾ ಪಂಚಾಯತ್
ಅಧಿಕಾರಿಗಳಿಗೆ ಆಥವಾ ತಮಗೆ ಅಥವಾ ಸಿಇಓ ಅವರಿಗೆ ತಿಳಿಸುವಂತೆ ಸೂಚಿಸಿದರು.
ಎಸ್ಡಬ್ಲ್ಯೂಎಂ ನಿವೇಶನ ಗುರುತಿಸುವಿಕೆ ಇನ್ನೂ ಬಾಕಿ ಇದ್ದು, ಇಓಗಳು ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು. ಅಂಗನವಾಡಿಗಳಿಗೆ ನಿವೇಶನ ಗುರುತಿಸುವ ಸಂಬಂಧ ಸರ್ಕಾರಿ ಹಾಸ್ಟೆಲ್ ಅಥವಾ ಸಮುದಾಯ ಭವನಗಳ ಬಳಿ ನಿವೇಶನ ಗುರುತಿಸಬೇಕು ಮತ್ತು ವಾರಕ್ಕೆ 2-3 ನಿವೇಶನಗಳ ಖಾತೆ ಮಾಡುವ ಗುರಿಯನ್ನು ಅಧಿಕಾರಿಗಳು ಇಟ್ಟುಕೊಳ್ಳಬೇಕು ಎಂದು ಅವರು ತಿಳಿಸಿದರು.
ಜ.13 ರಿಂದ ನ.8ರವರೆಗೆ ಕರಡು ಮತದಾರರ ವಿಶೇಷ ಸಂಕ್ಷಿಪ್ತ ಪಟ್ಟಿ ಪ್ರಕಟಣೆಗೂ ಮುನ್ನ ಇದ್ದಂತಹ ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಬಾಕಿ ಪ್ರಕರಣಗಳು ಯಾವುದೂ ಇರಬಾರದು. ಉಪವಿಭಾಗಾಧಿಕಾರಿಗಳು ಮತದಾರರ ಪಟ್ಟಿಯನ್ನು ಅಪ್ಡೇಟ್ ಮಾಡಬೇಕು. ಮತದಾರರ ಪಟ್ಟಿಯ ಸಂಪೂರ್ಣ ಹೊಣೆಗಾರಿಕೆ ಇಆರ್ಓ ಜವಾಬ್ದಾರಿಯಾಗಿರುತ್ತದೆ. ಮನೆ-ಮನೆ ಭೇಟಿ ಶೇ. 100ರಷ್ಟು ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.
ಕಂದಾಯ ಗ್ರಾಮಕ್ಕೆ ಸಂಬಂಧಿಸಿದಂತೆ 175 ಪ್ರಸ್ತಾವನೆಗಳು ಬಾಕಿ ಇದ್ದು, ಉಪವಿಭಾಗಾಧಿಕಾರಿಗಳು ಅಂತಿಮ ಅಧಿಸೂಚನೆ ಮಾಡಿದ್ದಲ್ಲಿ ಹಕ್ಕುಪತ್ರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಅಗತ್ಯ ವಸ್ತುಗಳ ದಾಸ್ತಾನು ಕಾಯ್ದೆಯಡಿ ದಾಖಲಾಗುವ 1ಲಕ್ಷಕ್ಕಿಂತ ಕಡಿಮೆ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಪವಿಭಾಗಾಧಿಕಾರಿಗಳು ಮಧ್ಯಂತರ ಆದೇಶವನ್ನು ಹೊರಡಿಸಬೇಕುಎಂದು ಜಿಲ್ಲಾಧಿಕರಿಗಳು ತಿಳಿಸಿದರು.
ಹೋರ್ಡಿಂಗ್ಸ್ ಮತ್ತು ಬ್ಯಾನರ್ಗಳನ್ನು ಕಾರ್ಯಕ್ರಮ ಮುಗಿದ ಮರುದಿನವೇ ತೆರವುಗೊಳಿಸುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಆರ್ಟಿಐ ಮೇಲ್ಮನವಿ ಪ್ರಕರಣಗಳಲ್ಲಿ ಮೇಲ್ಮನವಿ ಪ್ರಾಧಿಕಾರಿಯಾದಂತಹ ಜಿಲ್ಲಾಧಿಕಾರಿಗಳು ಹೊರಡಿಸುವ ಆದೇಶಗಳನ್ನು ಯಥಾವತ್ತಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಭೂಮಿ, ಆರ್ಆರ್ಟಿ ಕರಕ್ಷನ್ಸ್, ಜೆಇ ಸ್ಲಿಪ್, ವಾಜಪೇಯಿ ವಸತಿ, ಅಂಬೇಡ್ಕರ್ ಅವಾeóï ಯೋಜನೆ ಹಾಗೂ ನಗರೋತ್ಥಾನ ಯೋಜನೆಗಳ ಕುರಿತು ಮಾನ್ಯ ಜಿಲ್ಲಾಧಿಕಾರಿಗಳು ಪ್ರಗತಿ ಪರಿಶೀಲನೆಯನ್ನು ನಡೆಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಡಿಡಿಎಲ್ಆರ್ ಸುಜಯ್ ಕುಮಾರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.