ತುಮಕೂರು:
ಮೆದುಳು ಜ್ವರದ ವ್ಯಾಕ್ಸಿನ್ ಪಡೆದು 10 ಮಕ್ಕಳು ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ತಿಪಟೂರು ತಾಲ್ಲೂಕಿನ ಎರಡು ಶಾಲೆಗಳಲ್ಲಿ ಪ್ರತ್ಯೇಕ ನಡೆದಿದೆ. ತಿಪಟೂರು ತಾಲ್ಲೂಕಿನ ಗುರುಗದಹಳ್ಳಿ ಸರ್ಕಾರಿ ಪ್ರೌಡಶಾಲೆಯಲ್ಲಿ 8 ವಿದ್ಯಾರ್ಥಿಗಳು ಹಾಗೂ ಅದೇ ತಾಲ್ಲೂಕಿನ ನಗರದ ಸರ್ಕಾರಿ ಬಾಲಕೀಯರ ಪ್ರೌಡಶಾಲೆಯ ಇಬ್ಬರು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ. ಸದ್ಯ ಅಸ್ವಸ್ಥಗೊಂಡ ವಿದ್ಯಾರ್ಥಿಗಳನ್ನು ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡೂ ಶಾಲೆಗಳಲ್ಲಿ ಮೆದುಳು ಜ್ವರದ ಜೆಇ ವ್ಯಾಕ್ಸಿನ್ನನ್ನು ವಿದ್ಯಾರ್ಥಿಗಳು ಪಡೆದುಕೊಂಡಿದ್ದರು. ಬಳಿಕ ತಲೆ ಸುತ್ತು ಬಂದು ಅಸ್ವಸ್ಥಗೊಂಡಿದ್ದಾರೆ. ಆಸ್ಪತ್ರೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಯಾವುದೇ ತೊಂದರೆ ಇಲ್ಲಾ ಎಂದು ವೈದ್ಯರು ಸ್ಪಷ್ಟನೆ ನೀಡಿದ್ದಾರೆ.
ಜೆಇ ಮೆದುಳು ಜ್ವರ ತಡೆಯಲು ಕೇಂದ್ರ ಸರ್ಕಾರದಿಂದ ಉಚಿತ ಲಸಿಕೆ: ಡಾ. ಕೆ. ಸುಧಾಕರ್
ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿ ಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವಿಕಲತೆಯನ್ನು ಜೆಇ ಮೆದುಳು ಜ್ವರ ಉಂಟು ಮಾಡುತ್ತದೆ. ಹಾಗಾಗಿ ಈ ಜೆಇ (ಜೆನವ್ಯಾಕ್ ಜೆಇ) ಮೆದುಳು ಜ್ವರ ನಿಯಂತ್ರಣ ಹಿನ್ನೆಲೆ ಡಿ. 05 ರಿಂದ 48 ಲಕ್ಷ ಮಕ್ಕಳಿಗೆ ಕೇಂದ್ರ ಸರ್ಕಾರದಿಂದ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಹಿಂದೆ ಮಾಹಿತಿ ನೀಡಿದ್ದರು.
ಡಿಸೆಂಬರ್ ಮೊದಲನೇ ವಾರದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಲಸಿಕೆ ಹಾಕಿಸಲು ಕ್ರಮಕೈಗೊಳ್ಳಲಾಗಿತ್ತು. ಮೊದಲ ವಾರದಲ್ಲಿ ಶಾಲೆಗಳಲ್ಲಿ ಲಸಿಕಾಕರಣ, ಬಳಿಕ 10 ಜಿಲ್ಲೆಗಳಲ್ಲಿ 1 ಮತ್ತು 2ನೇ ಡೋಸ್ ಲಸಿಕೆ ಹಾಕಲಾಗುವುದು. 1-15 ವರ್ಷದ ಅಂದಾಜು 48 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಪ್ಲೇವಿ ವೈರಸ್ ಎಂಬ ವೈರಾಣುವಿನಿಂದ ಜೆಇ ಮೆದುಳು ಜ್ವರ ಬರುತ್ತದೆ. ಕ್ಯೂಲೆಕ್ಸ್ ಸೊಳ್ಳೆಗಳ ಮೂಲಕ ಈ ಜ್ವರ ಹರಡುತ್ತದೆ.
ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆ
ಕರ್ನಾಟಕದಲ್ಲಿ 1978 ರಲ್ಲಿ ಕೋಲಾರ ಜಿಲ್ಲೆಯಲ್ಲಿ ಮೊದಲ ಪ್ರಕರಣ ಪತ್ತೆಯಾಗಿತ್ತು. ರೋಗ ಪತ್ತೆಗೆ ರಾಜ್ಯದಲ್ಲಿ ಸೆಂಟಿನಲ್ ಸರ್ವೆಲೆನ್ಸ್ ಲ್ಯಾಬೊರೇಟರಿ ಸಜ್ಜುಗೊಳಿಸಲಾಗಿದೆ. ನಿಮ್ಹಾನ್ಸ್ -ಸ್ಟೇಟ್ ಅಪೆಕ್ಸ್ ಲ್ಯಾಬೊರೇಟರಿ, ವಿಮ್ಸ್-ಬಳ್ಳಾರಿ, ಕಿಮ್ಸ್-ಹುಬ್ಬಳ್ಳಿ, ಡಿಪಿಎಚ್‍ಎಲ್-ಕೋಲಾರ, ಮಣಿಪಾಲ್ ಸೆಂಟರ್ ಫಾರ್ ವೈರಸ್ ರಿಸರ್ಚ್-ಉಡುಪಿ, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ವೈರಾಲಜಿ(ಎನ್‍ಐವಿ)-ಬೆಂಗಳೂರು ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಧಾರವಾಡ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು 10 ಜೆಇ ಎಂಡೆಮಿಕ್ ಜಿಲ್ಲೆಗಳು ಎಂದು ಗುರುತಿಸಲಾಗಿದೆ.