ತುಮಕೂರು


ಮಾಂಡೋಸ್ ಚಂಡಮಾರುತದ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ಕಲ್ಪತರುನಾಡಿನಲ್ಲೂ ಶೀತ ಸಹಿತ ಜಿಟಿಜಿಟಿ ಮಳೆಯಾಗುತ್ತಿದ್ದು, ಜನಸಾಮಾನ್ಯರು ಮೈಬಿಡದ ಚಳಿ, ಶೀತಗಾಳಿ, ಜಿಟಿಜಿಟಿ ಮಳೆಯಿಂದ ಹೈರಾಣಾಗಿದ್ದಾರೆ.
ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ಆಗುತ್ತಿರುವುದರಿಂದ ಎಂದಿನಂತೆ ಕೆಲಸ ಕಾರ್ಯಗಳಿಗೆ ತೆರಳಲು ಜನಸಾಮಾನ್ಯರು ಸಾಧ್ಯವಾಗದೆ ಮಳೆಯಿಂದ ಕಿರಿಕಿರಿ ಅನುಭವಿಸುವಂತಾಗಿದೆ.
ಇಂದು ಶನಿವಾರ ಆಗಿರುವುದರಿಂದ ಶಾಲಾ-ಕಾಲೇಜುಗಳಿಗೆ ತೆರಳು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಸ್ವೆಟರ್, ಜರ್ಕಿನ್ ಮೊರೆ ಹೋಗಿದ್ದು, ಛತ್ರಿಗಳನ್ನು ಹಿಡಿದು ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಎರಡನೇ ಶನಿವಾರ ಆಗಿರುವುದರಿಂದ ಸರ್ಕಾರಿ ಕಚೇರಿಗಳು, ಬ್ಯಾಂಕ್‍ಗಳಿಗೆ ರಜೆ. ಹಾಗಾಗಿ ಸರ್ಕಾರಿ ನೌಕರರು ಇಂದಿನ ಶೀತ ಸಹಿತ ಮಳೆಯಿಂದ ಪಾರಾಗಿದ್ದಾರೆ. ಆದರೆ ಖಾಸಗಿ ಸಂಸ್ಥೆಗಳ ನೌಕರರು, ದಿನಗೂಲಿ ನೌಕರರು, ಕೂಲಿ ಕಾರ್ಮಿಕರು ಎಂದಿನಂತೆ ತಮ್ಮ ಕಚೇರಿಗಳಿಗೆ ಕೆಲಸ ಕಾರ್ಯಗಳಿಗೆ ಜಿಟಿಜಿಟಿ ಮಳೆಯಲ್ಲೆ ನೆನೆಯುತ್ತಾ ದ್ವಿಚಕ್ರ ವಾಹನಗಳಲ್ಲಿ ತೆರಳಿದರು.
ಮೈ ಬಿಡಲು ಸಾಧ್ಯವಾಗದ ಚಳಿಯನ್ನು ಸಹಿಸಿಕೊಂಡೇ ಜನರು ತಮ್ಮ ದಿನನಿತ್ಯದ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು.
ವಯಸ್ಸಾದಂತಹವರು, ಮಕ್ಕಳು, ಮಹಿಳೆಯರು ಮಳೆ-ಚಳಿಯಿಂದಾಗಿ ಮನೆಯಿಂದ ಹೊರಗೆ ಬರಲಾಗದೆ ಮನೆಯಲ್ಲಿ ಹೊದಿಕೆಗಳ ಮೊರೆ ಹೋಗಿರುವುದು ಸಹ ಜಿಲ್ಲೆಯಾದ್ಯಂತ ಕಂಡು ಬಂದಿದೆ.
ಇನ್ನು ಎರಡು-ಮೂರು ದಿನಗಳ ಕಾಲ ಶೀತ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರುವುದರಿಂದ ಜನತೆ ಸ್ವೆಟರ್, ಜರ್ಕಿನ್‍ಗಳ ಮೊರೆ ಹೋಗಿದ್ದು, ಮಳೆಯಿಂದ ಸೇಫ್ಟಿಯಾಗಿರಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣದೊಂದಿಗೆ ಜಿಟಿಜಿಟಿ ಮಳೆ ಸುರಿಯುತ್ತಿರುವುದರಿಂದ ಬೀದಿ ಬದಿ ವ್ಯಾಪಾರಿಗಳು ಜನರಿಲ್ಲದೆ ಸಂಕಷ್ಟ ಅನುಭವಿಸುವಂತಾಗಿದೆ.

(Visited 1 times, 1 visits today)