ತುಮಕೂರು
ಒಕ್ಕಲಿಗರ ಸಂಘಟನೆ ಮತ್ತು ಶೈಕ್ಷಣಿಕ ಅಭಿವೃದ್ದಿಯ ದೃಷ್ಟಿಯಿಂದ 1906ರಲ್ಲಿ ಕೆ.ಹೆಚ್.ರಾಮಯ್ಯ ಅವರಿಂದ ಆರಂಭವಾದ ಒಕ್ಕಲಿಗರ ಸಂಘ ಇಂದು ಬೃಹದಾಕಾರವಾಗಿ ಬೆಳೆದು ನಿಂತಿದ್ದು,ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಅರ್ಥಿಕವಾಗಿ ಮುನ್ನೆಡೆಸುವಲ್ಲಿ ಯಶಸ್ವಿಯಾಗಿದೆ ಎಂದು ಆದಿಚುಂಚನಗಿರಿ ಸಂಸ್ಥಾನ ಪೀಠದ
ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಬಡ್ಡಿಹಳ್ಳಿ ಮುಖ್ಯರಸ್ತೆಯಲ್ಲಿರುವ ಕೃಷ್ಣಾ ನಗರದಲ್ಲಿ ರಾಜ್ಯ ಒಕ್ಕಲಿಗರ ಸಂಘದವತಿಯಿಂದ ನಿರ್ಮಾಣಗೊಂಡಿರುವ ಉಚಿತ ವಸತಿ ನಿಲಯ ಹಾಗೂ ಸಮುದಾಯಭವನ ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡುತಿದ್ದ ಅವರು,ವಿವೇಕಾನಂದರ ಮಾತಿನಂತೆ ಸಂಘಟನೆಗಾಗಿ ರಾಜ್ಯ ಒಕ್ಕಲಿಗರ ಸಂಘ ಮತ್ತು ಧಾರ್ಮಿಕ, ಆದ್ಯಾತ್ಮಿಕ ಸಂಸ್ಕಾರಕ್ಕಾಗಿ ಆದಿಚುಂಚನಗಿರಿಯನ್ನು ಕೆ.ಹೆಚ್.ರಾಮಯ್ಯ ಆರಂಭಿಸಿದ್ದರ ಫಲ, ಇಂದು ನಾವು,ನೀವು ಎಲ್ಲರೂ ಒಂದೆಡೆ ಸೇರುವಂತಾಗಿದೆ ಎಂದರು.
ನಿಕಟ ಪೂರ್ವ ಒಕ್ಕಲಿಗ ಸಂಘದ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಕನಿಷ್ಟ ಅವರಿಗೆ ಗೌರವ ಸಲ್ಲಿಸುವ ಕೆಲಸವನ್ನು ಸಂಘ ಮಾಡಿಲ್ಲ ಎಂದು ನಿರ್ಮಲಾನಂದ ಸ್ವಾಮೀಜಿಗಳ ಮುಂದೆ ಆಕ್ರೋಶ ವ್ಯಕ್ತ ಪಡಿಸಿದರು.
ಅಭಿವೃದ್ದಿ ಎಂಬುದು ನಿರಂತರ.ಒಂದು ಸಂಘದಲ್ಲಿ ಹಿಂದಿನವರ ಕಾಲದಲ್ಲಿ ಆರಂಭವಾದ ಕೆಲಸಗಳು, ಈಗಿನವರ ಕಾಲದಲ್ಲಿ ಮುಕ್ತಾಯಗೊಂಡು ,ಉದ್ಘಾಟನೆಯಾದರೆ, ಇಂದಿನವರು ಆರಂಭಿಸಿದ ಕೆಲಸವನ್ನು ಮುಂದೆ ಬಂದವರು ಉದ್ಘಾಟಿಸುತ್ತಾರೆ. ಹಾಗಾಗಿ ಸಂಘದ ಮೂಲಕ ಸಮುದಾಯಕ್ಕೆ ಶಾಶ್ವತ ಆಸ್ತಿ ಹೊಂದಲು ಸಹಕರಿಸಿದ ಎಲ್ಲರನ್ನು ನಾವು ನೆನೆಯಬೇಕಿದೆ. ನಮ್ಮಲ್ಲಿರುವ ಒಡಕು ಇತರರಿಗೆ ಕಾಣದಂತೆ ಒಗ್ಗಟ್ಟು ಪ್ರದರ್ಶಿಸಬೇಕಿದೆ.ಇದರಿಂದ ಸಂಘಕ್ಕೂ ಗೌರವ, ಸಮುದಾಯಕ್ಕೂ ಗೌರವ ಎಂದು ಕಿವಿಮಾತನ್ನು ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಸಮುದಾಯವನ್ನು ಒಂದು ವೇದಿಕೆಗೆ ತಂದು, ಒಕ್ಕಲಿಗರ ಮಹಾಸಂಗಮ ಮಾಡುವ ಉದ್ದೇಶ ನಮ್ಮದಿದೆ.ವಿಧಾನಸೌಧ ಕಟ್ಟಿಸಿದ ಕೆಂಗಲ್ ಹನುಮಂತಯ್ಯ ಅವರನೇ ಅದರೊಳಗೆ ಕೂರದಂತೆ ನಮ್ಮವರೇ ಸಂಚು ಮಾಡಿ ಹೊರಹಾಕಿದರು.ದಕ್ಷಿಣ ಭಾರತದ ಮೊದಲ ಪ್ರಧಾನಿ ಹೆಚ್.ಡಿ.ದೇವೇಗೌಡರನ್ನು ನಮಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದು ಅಧಿಕಾರದಿಂದ ಕೆಳಗೆ ಇಳಿಸಿದರು.ಇಷ್ಟೆಲ್ಲದ ನಡುವೆಯೂ ನಾವು ನಮ್ಮ ಸ್ವಾಭಿಮಾನವನ್ನು ಬಿಟ್ಟು ನಡೆದ ಉದಾಹರಣೆಗಳಿಲ್ಲ. ಅಂತಹ ಗಟ್ಟಿತನ ನಮ್ಮ ಸಮುದಾಯದಲ್ಲಿದೆ. ಟೀಕೆಗಳಿಗೆ ಧೈರ್ಯ ಗೆಡದೆ, ಸಹನೆಯ ಜೊತೆಗೆ, ಸುಗಮ ಆಡಳಿತ ನೀಡುವ ಗುರುತರ ಜವಾಬ್ದಾರಿ ರಾಜ್ಯ ಒಕ್ಕಲಿಗರ ಸಂಘದ ಮೇಲಿದೆ ಎಂದು ಸ್ವಾಮೀಜಿ ನುಡಿದರು.
ಒಕ್ಕಲಿಗ ಸಮುದಾಯದ ಆರು ಜನ ಶಾಸಕರು ತುಮಕೂರು ಜಿಲ್ಲೆಯಲ್ಲಿ ಆಯ್ಕೆಯಾಗಿದ್ದಾರೆ. 6 ಜನರ ಪೈಕಿ ಯಾರೋಬ್ಬರು ಸಹ ಒಕ್ಕಲಿಗ ಸಂಘದ ಉಚಿತ ವಿದ್ಯಾರ್ಥಿನಿಲಯದ ಉದ್ಘಾಟನ ಸಮಾರಂಭದಲ್ಲಿ ಭಾಗಿಯಾಗಿರುವುದಿಲ್ಲ. ಕೇವಲ ಓಟ್ ಬ್ಯಾಂಕಿಗಾಗಿ ಒಕ್ಕಲಿಗ ಮತದಾರರನ್ನು ಬಳಕೆ ಮಾಡಿಕೊಳ್ಳುತ್ತಾರೆ. ಎಂದು ರಾಜ್ಯ ಒಕ್ಕಲಿಗ ಸಂಘದ ಪದಾಧಿಕಾರಿಗಳನ್ನು ಬಹಿರಂಗ ಸಮಾರಂಭದಲ್ಲೆ ತರಾಟೆಗೆ ತೆಗೆದುಕೊಂಡಿದ್ದಾರೆ. ಒಕ್ಕಲಿಗ ಸಮುದಾಯವನ್ನು ಬರಿ ಮತದಾರರನ್ನಾಗಿ ಮಾಡಿಕೊಳ್ಳುವುದು ಬೇಡ ನಮ್ಮ ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗಿಯಾಗದಿದ್ದರೆ ಹೇಗೆ ನಮ್ಮ ಸಮುದಾಯದ ಮತ ಪಡೆದು ಆಯ್ಕೆಯಾಗಿ ಸಮುದಾಯದ ಕಾರ್ಯಕ್ರಮಗಳಿಗೆ ಗೈರು ಹಾಜರಾಗುವಂತಹ ಶಾಸಕರಿಗೆ ಸ್ವಾಮೀಜಿಗಳು ಬುದ್ದಿ ಹೇಳಬೇಕು ಎಂದು ಉಧ್ಯಮಿ ಚಂದ್ರಶೇಖರ್ ಸಭೆಯಲ್ಲಿ ಮನವಿ ಮಾಡಿದರು.
ಒಕ್ಕಲಿಗ ಸಮುದಾಯದ ಶಾಸಕರು ಸಮುದಾಯದ ಕಾರ್ಯಕ್ರಮಗಳಲ್ಲಿ ಭಾಗಿ ಯಾಗದಿದ್ದರೆ ಬೇಡವೆ ಬೇಡ ಇನ್ನು ಮುಂದೆ ಯಾವುದೇ ಕಾರ್ಯಕ್ರಮಗಳಿಗೆ ಅಂತಹ ಶಾಸಕರನ್ನು ಆಹ್ವಾನಿಸ ಬೇಡಿ ಅವರ ಹೆಸರನ್ನು ಯಾವುದೇ ಆಹ್ವಾನ ಪತ್ರಿಕೆಗಳಲ್ಲಿ ಮುದ್ರಿಸ ಬೇಡಿ ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಹಾಗೂ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ,ಸಂಘ ಶಿಕ್ಷಣ ಮತ್ತು ಸಂಘಟನೆಗೆ ಹೆಚ್ಚಿನ ಒತ್ತು ನೀಡುತ್ತಿದೆ.ನಗರಸಭೆ ನೀಡಿದ್ದ 9 ಗುಂಟೆ ಜಾಗದಲ್ಲಿ ಒಂದು ಸಮುದಾಯ ಭವನದ ಜೊತೆಗೆ,200 ಜನ ಗಂಡು ಮಕ್ಕಳಿಗೆ ಉಚಿತ ವಿದ್ಯಾರ್ಥಿ ನಿಲಯಕಟ್ಟಲಾಗಿದೆ ಎಂದರು.ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಶ್ರೀಗಂಧ ಕಾವಲ ವಿದ್ಯಾಸಂಸ್ಥೆಗಳ ಅಧ್ಯಕ್ಷ ಆರ್.ಹನುಮಂತರಾಯಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಮಂಗಳನಾಥ ಸ್ವಾಮೀಜಿ, ಅರೆಶಂಕರಮಠದ ಶ್ರೀ ಸಿದ್ದರಾಮಚೈತನ್ಯ ಸ್ವಾಮೀಜಿ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪ್ಪರೆಡ್ಡಿ,ನಿರ್ದೇಶಕರಾದ ಲೋಕೇಶ್ ಡಿ.ನಾಗರಾಜಯ್ಯ, ಹನುಮಂತರಾಯಪ್ಪ, ಡಾ.ಅಂಜನಪ್ಪ, ಕೋಶಾಧಿಕಾರಿ ಆರ್.ಪ್ರಕಾಶ್,ಮಾಜಿ ಸಂಸದ ಮುದ್ದಹನು ಮೇಗೌಡ,ಮಾಜಿ ಟೂಡಾ ಅಧ್ಯಕ್ಷ ಸಿದ್ದಲಿಂಗೌಡ, ನಗರಪಾಲಿಕೆ ಸದಸ್ಯರಾದ ಧರಣೇಂದ್ರಕುಮಾರ್, ವೀಣಾ ಮನೋಹರಗೌಡ, ಮನು, ಮಾಜಿ ಸದಸ್ಯ ಟಿ.ಆರ್.ನಾಗರಾಜು,ವಿಯಕುಮಾರ್, ಆರ್.ಕಾಮರಾಜು,ಹೆಚ್. ಎಸ್.ಮಂಜುನಾಥ್, ದೇವರಾಜ ಕಲ್ಲಹಳ್ಳಿ,ಲೀಲಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.