ತುಮಕೂರು
ಸರ್ಕಾರದ ಮಹತ್ವಾಕಾಂಕ್ಷೆಯ ‘ಜೆ.ಇ’ ಲಸಿಕಾ ಅಭಿಯಾನವನ್ನು ಈ ತಿಂಗಳ 24 ರೊಳಗಾಗಿ ಶೇ.100ರಷ್ಟು ಯಶಸ್ವಿಗೊಳಿಸಬೇಕಿದ್ದು, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ತೆರೆದು 1 ರಿಂದ 15 ವರ್ಷದೊಳಗಿನ ಯಾವ ಮಕ್ಕಳೂ ಸಹ ಲಸಿಕೆಯಿಂದ ಹೊರಗುಳಿಯದಂತೆ ವ್ಯಾಪಕ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಲಸಿಕಾಕರಣ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ಜಿಲ್ಲಾ/ ತಾಲ್ಲೂಕು ಮಟ್ಟದ ಅಧಿಕಾರಿಗಳ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಮಾತನಾಡುತ್ತಾ, ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು. ಈ ನಿಟ್ಟಿನಲ್ಲಿ ಯೋಜನೆ ಹಾಗು ರೂಟ್‍ಮ್ಯಾಪ್ ಹಾಕಿಕೊಳ್ಳುವಂತೆ ಸಿಡಿಪಿಓ ಹಾಗೂ ಡಿಡಿಪಿಐ ಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ತಮ್ಮ ತಮ್ಮ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿಯ ಎಲ್ಲ ಮಕ್ಕಳಿಗೂ ಸಹ ಜೆಇ ಲಸಿಕೆ ಹಾಕಿರುವ ಕುರಿತು ಸಿಡಿಪಿಓ ಹಾಗೂ ಡಿಡಿಪಿಐಗಳು ದೃಢೀಕರಣಪತ್ರ ನೀಡುವಂತೆ ಅವರು ತಿಳಿಸಿದರು. ಯೋಜನಾಬದ್ದವಾಗಿ ಲಸಿಕಾ ರೂಪುರೇಷೆ ರೂಪಿಸಿ, ಬಿಆರ್‍ಸಿ, ಸಿಆರ್‍ಸಿ ಸೇರಿದಂತೆ ಲಭ್ಯವಿರುವ ಸಿಬ್ಬಂದಿಯನ್ನು ಸಮರ್ಪವಾಗಿ ಬಳಸಿಕೊಂಡು ಗುರಿ ತಲುಪುವಂತೆ ಅವರು ತಿಳಿಸಿದರು. ಈ ಅಭಿಯಾನದ ದಿನಾಂಕಗಳಲ್ಲಿ ಪ್ರಾ.ಆ.ಕೇಂದ್ರ, ಸಾರ್ವಜನಿಕ ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಸಹ ಲಸಿಕೆ ನೀಡಲು ಕ್ರಮ ವಹಿಸುವುದು ಎಂದು ಅವರು ತಿಳಿಸಿದರು.
ಅಂತೆಯೇ ಅಭಾ ಕಾರ್ಡ್ ನೋಂದಣಿಯೂ ಸಹ ಪ್ರಗತಿದಾಯಕವಾಗಬೇಕು ಈ ನಿಟ್ಟಿನಲ್ಲಿ ಆಯಾ ಉಪವಿಭಾಗದ ಉಪವಿಭಾಗಾಧಿಕಾರಿಗಳೂ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.
ಇದೇ ತಿಂಗಳ 14ರಂದು ತುಮಕೂರು ಜಿಲ್ಲೆಯಲ್ಲಿ 5 ನಮ್ಮ ಕ್ಲಿನಿಕ್‍ಗಳು ಕಾರ್ಯಾರಂಭಗೊಳ್ಳಲಿದೆ. ತುಮಕೂರು ನಗರದ ಮೆಳೇಕೋಟೆ ಹಾಗೂ ಮರಳೂರುದಿಣ್ಣೆ ಸೇರಿದಂತೆ ನಗರದಲ್ಲಿ ಎರಡು, ಪಾವಗಡ, ಸಿ.ಎನ್. ಹಳ್ಳಿ ಹಾಗು ಮಧುಗಿರಿಯಲ್ಲಿ ತಲಾ ಒಂದೊಂದು ಕ್ಲಿನಿಕ್ ಚಾಲನೆಗೊಳ್ಳಲಿದ್ದು, ಆಯಾ ಕ್ಷೇತ್ರದ ಶಾಸಕರನ್ನು ಆಹ್ವಾನಿಸಿ ಅವರ ಮೂಲಕ ನಮ್ಮ ಕ್ಲಿನಿಕ್‍ಗೆ ಚಾಲನೆ ನೀಡುವಂತೆ ಅವರು ತಿಳಿಸಿದರು.
ಆಧಾರ್ ಸೀಡಿಂಗ್ ಕೆಲಸಕ್ಕೆ ಪ್ರಥಮ ಆದ್ಯತೆ ನೀಡುವುದು, ಅಂತೆಯೇ ತಾತ್ಕಾಲಿಕ ಸಸ್ಪೆಂಡೆಡ್ ಆಧಾರ್ ಸೀಡಿಂಗ್ ಪ್ರಕರಣಗಳನ್ನೂ ಸಹ ಪ್ರಥಮಾದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು ಎಂದರು.
ಜೆಸ್ಲಿಪ್, ಮ್ಯುಟೇಷನ್, ಮತದಾರರ ಮನೆಮನೆ ಸಮೀಕ್ಷೆ, ಇ- ರೋಲ್ ಅಪ್‍ಡೇಟ್, ಭೂಮಿ ಪೆಂಡೆನ್ಸಿ ಇನ್ನಿತರ ವಿಷುಯಗಳ ಕುರಿತು ಜಿಲ್ಲಾಧಿಕಾರಿಗಳು ಸಮಗ್ರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಜಿ.ಪಂ.ಸಿಇಓ ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಅಜಯ್, ಸಮಾಜಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೇಮ, ಡಿಹೆಚ್‍ಓ ಮಂಜುನಾಥ್, ಡಿ.ಎಸ್. ವೀಣಾ, ತಹಸೀಲ್ದಾರುಗಳಾದ ಆರತಿ, ಸಿದ್ದೇಶ್ ಭಾಗವಹಿಸಿದ್ದರು.