ತುಮಕೂರು
ಕಲ್ಪತರುನಾಡು ತುಮಕೂರು ನಗರದಲ್ಲಿ ಎರಡು ದಿನಗಳ ಕಾಲ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿರುವ ಅಕ್ಷರ ನುಡಿ ಜಾತ್ರೆಗೆ ವಿದ್ಯುಕ್ತ ಚಾಲನೆ ದೊರೆಯಿತು.
ನಗರದಲ್ಲಿ ಕನ್ನಡದ ಸಾಹಿತ್ಯ ತೇರು ಎಳೆಯಲು ನಡೆದಿರುವ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಷ್ಟ್ರಧ್ವಜಾರೋಹಣ, ನಾಡಧ್ವಜಾರೋಹಣ ಹಾಗೂ ಕಸಾಪ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ನಗರದ ಟೌನ್‍ಹಾಲ್ ವೃತ್ತದಲ್ಲಿರುವ ಮಹಾನಗರ ಪಾಲಿಕೆ ಆವರಣದಲ್ಲಿ 14ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಎಂ.ವಿ. ನಾಗರಾಜರಾವ್ ಅವರನ್ನು ಶಾಸಕ ಜ್ಯೋತಿಗಣೇಶ್ ಹಾಗೂ ಜಿಲ್ಲಾ ಕಸಾಪ ಅಧ್ಯಕ್ಷರಾದ ಕೆ.ಎಸ್. ಸಿದ್ದಲಿಂಗಪ್ಪ ಅವರು ಆತ್ಮೀಯವಾಗಿ ಬರ ಮಾಡಿಕೊಂಡರು.
ಸಮ್ಮೇಳನಾಧ್ಯಕ್ಷರಾದ ಎಂ.ವಿ. ನಾಗರಾಜರಾವ್ ಅವರನ್ನು ಜಿಲ್ಲಾ ಕಸಾಪ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಿ ಬೆಳ್ಳಿರಥದಲ್ಲಿ ಕೂರಿಸಲಾಯಿತು. ನಂತರ ಶಾಸಕ
ಜ್ಯೋತಿಗಣೇಶ್ ಅವರು ಕನ್ನಡದ ಬಾವುಟ ತೋರಿಸುವ ಮೂಲಕ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಿದರು.
ಟೌನ್‍ಹಾಲ್ ವೃತ್ತದಿಂದ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಕನ್ನಡ
ಸಾಹಿತ್ಯ, ಪರಂಪರೆ, ಗ್ರಾಮೀಣ ಸೊಗಡನ್ನು ಬಿಂಬಿಸುವ ಜಾನಪದ ಕಲಾ ಮೇಳಾದ ಆನೆ ಕುಣಿತ, ಕೋಲಾಟ, ವೀರಗಾಸೆ, ನಂದಿಧ್ವಜ, ಡೊಳ್ಳುಕುಣಿತ, ಸೋಮನ ಕುಣಿತ, ನಾಸಿಕ್ ಡೋಲು, ನಾದಸ್ವರ, ಗಾರುಡಿ ಗೊಂಬೆ, ಕೋಳಿ ನೃತ್ಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಂದ ಅತ್ಯಾಕರ್ಷಕ ಪ್ರದರ್ಶನ ನಡೆಯಿತು. ಮೆರವಣಿಗೆ ಸಾಗಿದ ಉದ್ದಕ್ಕೂ ಕನ್ನಡದ ಡಿಂಡಿಮ ಮೊಳಗಿತು.
ಮಹಾನಗರ ಪಾಲಿಕೆಯಿಂದ ಆರಂಭವಾದ ಮೆರವಣಿಗೆಯು ಬಿ.ಜಿ.ಎಸ್. ವೃತ್ತ, ಎಂ.ಜಿ. ರಸ್ತೆ, ಗುಂಚಿ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಡಾ.ಅಂಬೇಡ್ಕರ್ ಬೀದಿ ಮಾರ್ಗವಾಗಿ ಸಾಹಿತ್ಯ ಸಮ್ಮೇಳನ ನಡೆಯುವ ಗಾಜಿನ ಮನೆಯಲ್ಲಿ ಭವ್ಯವಾಗಿ ಸಿದ್ದಗೊಳಿಸಿರುವ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ ವೇದಿಕೆಗೆ ತಲುಪಿತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ವೇದಿಕೆಗೆ ಬರುತ್ತಿದ್ದಂತೆ ನೆರೆದಿದ್ದ ಸಾಹಿತಿಗಳು, ಸಾಹಿತ್ಯಾಸಕ್ತರು, ಕನ್ನಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಸಮ್ಮೇಳಾಧ್ಯಕ್ಷರ ಮೆರವಣಿಗೆಗೂ ಮುನ್ನ ಉಪವಿಭಾಗಾಧಿಕಾರಿ ಅಜಯ್ ರಾಷ್ಟ್ರಧ್ವಜಾರೋಹಣ, ಉಪಮೇಯರ್ ಟಿ.ಕೆ. ನರಸಿಂಹಮೂರ್ತಿ ನಾಡಧ್ವಜಾರೋಹಣ ಹಾಗೂ ಪರಿಷತ್ತಿನ ಧ್ವಜಾರೋಹಣವನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ನೆರವೇರಿಸಿದರು.
ಇಂದಿನಿಂದ ಆರಂಭವಾದ 14ನೇ ಜಿಲ್ಲಾ ಕಸಾಪ ಸಮ್ಮೇಳನದಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಪರಂಪರೆ ಸೇರಿದಂತೆ ಕನ್ನಡ ಕಹಳೆ ಮೊಳಗಿತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಹಿರಿಯ ಸಾಹಿತಿ ಕವಿತಾಕೃಷ್ಣ, ಪಾಲಿಕೆ ಸದಸ್ಯ ಗಿರಿಜಾ ಧನಿಯಾಕುಮಾರ್, ಪಾಲಿಕೆ ಆಯುಕ್ತ ಯೋಗಾನಂದ್ ಸೇರಿದಂತೆ ಕಸಾಪ ಪದಾಧಿಕಾರಿಗಳು ಪಾಲ್ಗೊಂಡಿದ್ದರು.