ತುಮಕೂರು :

ರಾಜ್ಯ ಸರಕಾರ ಡಿಸೆಂಬರ್ 19 ರಿಂದ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಪರಿಶಿಷ್ಟ ಜಾತಿಯ ಒಳಮೀಸಲಾತಿ ಕುರಿತಂತೆ ಚರ್ಚೆ ನಡೆಸಿ, ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ ಒತ್ತಾಯಿಸಿದ್ದಾರೆ.

ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ದಲಿತ ಸಮುದಾಯದ ಮುಖಂಡರು ಆಯೋಜಿಸಿದ್ದ ಒಳಮೀಸಲಾತಿ ಕುರಿತು ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಅವರು,ಸರಕಾರ ಒಳಮೀಸಲಾತಿ ಕುರಿತಂತೆ ಉಪಸಮಿತಿ ರಚಿಸುವ ಮೂಲಕ ದಲಿತರ ಕಣೋರೆಸುವ ತಂತ್ರಗಾರಿಕೆ ಅನುಸರಿಸುತ್ತಿದೆ.ಈಗಾಗಲೇ ಇಂತಹ ಹಲವಾರು ತಂತ್ರಗಾರಿಕೆಯಿಂದ ದಲಿತರು ಸಾಕಷ್ಟು ಅವಕಾಶಗಳನ್ನು ಕಳೆದುಕೊಂಡು,ಅಸ್ಥಿತ್ವಕ್ಕೆ ಧಕ್ಕೆ ತಂದುಕೊಂಡಿದ್ದಾರೆ.ಹಾಗಾಗಿ ಈ ಸಾಲಿನ ಚಳಿಗಾಲದ ಅಧಿವೇಶದಲ್ಲಿ ಒಳಮೀಸಲಾತಿ ಕುರಿತಂತೆ ಒಂದು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡು, ಕಳೆದ 12 ವರ್ಷಗಳಿಂದ ಕೊಳೆಯುತ್ತಾ ಬಿದ್ದಿರುವ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸದನದಲ್ಲಿ ಚರ್ಚಿಸಿ, ಜಾರಿಗೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂಬುದು ನಮ್ಮೆಲ್ಲಾ ಹೋರಾಟಗಾರರ ಆಗ್ರಹವಾಗಿದೆ ಎಂದರು.
ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಅಧ್ಯಕ್ಷ ಎನ್.ಕೆ.ನಿಧಿಕುಮಾರ್ ಮಾತನಾಡಿ,ಒಳಮೀಸಲಾತಿ ಎಂಬುದು ಪರಿಶಿಷ್ಟ ಜಾತಿಯಲ್ಲಿಯೇ ಇರುವ 101 ಜಾತಿಗಳ ನಡುವಿನ ಸಾಮಾಜಿಕ ನ್ಯಾಯದ ಹೋರಾಟವಾಗಿದೆ.ಈ ಹಿಂದೆ ಹೋರಾಟಗಳು ನಡೆದಾಗ,ಹೊಲೆಯರು,ಮಾದಿಗರು ಹಾಗೂ ಇತರೆ ಜಾತಿಗಳು ಒಗ್ಗೂಡದಿರುವುದನ್ನೇ ನೆಪ ಮಾಡಿ ಕೊಂಡು ಜಾರಿಗೆ ಹಿಂದೇಟು ಹಾಕಲಾಗಿತ್ತು. ಈಗ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳು ಒಗ್ಗೂಡಿ ಇದರ ಜಾರಿಗೆ ಹೋರಾಟ ನಡೆಸುತ್ತಿರುವಾಗ ಉಪಸಮಿತಿ ಎಂಬ ನಾಟಕವಾಡುತ್ತಿದೆ.ಇಡಬ್ಲ್ಯುಎಸ್ ಜಾರಿ, ಲಿಂಗಾಯಿತರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವಾಗ ಇಲ್ಲದ ಉಪಸಮಿತಿ, ದಲಿತರ ವಿಚಾರದಲ್ಲಿ ಮಾತ್ರ ಏಕೇ ಎಂಬುದು ನಮ್ಮ ಪ್ರಶ್ನೆ ಯಾಗಿದೆ.ಈ ವಿಚಾರವನ್ನು 2023ರ ವಿಧಾನಸಭಾ ಚುನಾವಣೆಯವರಗೂ ಎಳೆದುಕೊಂಡು ಹೋಗಿ,ದಲಿತರ ಮತ ಪಡೆಯುವ ಹುನ್ನಾರವನ್ನು ಬಿಜೆಪಿ ಮಾಡುತ್ತಿದೆ.ಈ ಭಾರಿ ದಲಿತರು ಮೋಸ ಹೋಗುವ ಪ್ರಮಯವೇ ಇಲ್ಲ.ಒಳ ಮೀಸಲಾತಿಯ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸದಿದ್ದರೆ ಬಿಜೆಪಿಯನ್ನು ಈ ಬಾರಿ ದಲಿತರು ಮನೆಗೆ ಕಳುಹಿಸುವದು ಅನಿವಾರ್ಯ ಎಂದು ಎಚ್ಚರಿಸಿದರು.
ಸಭೆಯಲ್ಲಿ ಮುಖಂಡರಾದ ಆಟೋ ಶಿವರಾಜು, ಲಕ್ಷ್ಮಿನಾರಾಯಣ್, ಮಾರುತಿ.ಸಿ, ಗಿರೀಶ್, ಬಾಲರಾಜ್, ಮನೋಜ್.ಟಿ, ನಿತೀನ್,ವಿನಯ್, ನವೀನ್, ಶಿವರಾಜು ಕುಚ್ಚಂಗಿ, ಶಿವಣ್ಣಕೊತ್ತಿಹಳ್ಳಿ, ನವೀನ್, ಗಂಗಾಧರ್,ಅಶೀಫ್
ಸೇರಿದಂತೆ ಹಲವರು ಉಪಸ್ಥಿತರಿದ್ದರು.

(Visited 2 times, 1 visits today)