ತುಮಕೂರು
ಹಿಂದುಳಿದ ವರ್ಗಗಳ ಸಮಾಜಕ್ಕೆ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುದಾನದ ಭರಪೂರ ಕೊಡುಗೆಗಳನ್ನು ನೀಡಿವೆ ಎಂದು ಬಿಜೆಪಿ ತುಮಕೂರು ನಗರ ಮಂಡಲದ ಒಬಿಸಿ ಮೋರ್ಚಾ ಅಧ್ಯಕ್ಷ ಹನುಂತಪುರ ಹನುಮಂತರಾಜು ತಿಳಿಸಿದರು.
ಇವರು ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ತುಮಕೂರು ನಗರ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಕೇಂದ್ರದ ಪ್ರಧಾನಿ ನರೇಂದ್ರಮೋದಿರವರ ಸರ್ಕಾರವು ನಿರೀಕ್ಷೆಗೂ ಮೀರಿ ಅನುದಾನ ನೀಡಿದೆ. ರಾಜ್ಯದಲ್ಲೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ 400 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಘೋಷಿಸಿ 2ನೇ ಕಂತಿನ ಹಣವನ್ನೂ ಬಿಡುಗಡೆಗೊಳಿಸಿದೆಯಲ್ಲದೆ, ಬಹುತೇಕ ಹಿಂದುಳಿದ ವರ್ಗಕ್ಕೆ ಸೇರಿದ ಶ್ರಮಿಕ, ಕಾರ್ಮಿಕ ವಲಯಕ್ಕೆ 2000 ಕೋಟಿ ರೂ.ಗಳ ಹಣವನ್ನು ಡಿಬಿಟಿ ಮೂಲಕ ನೇರವಾಗಿ ಕಾರ್ಮಿಕರ ಖಾತೆಗೆ ಹಾಕಲಾಗಿದೆ ಎಂದು ವಿವರಿಸಿದರು.
ತುಮಕೂರಿನಲ್ಲಿ ಕುರುಬ, ಉಪ್ಪಾರ, ತಿಗಳ, ನೇಕಾರ, ಗಂಗಮತಸ್ಥ, ಮಡಿವಾಳ, ಸವಿತ ಸಮಾಜಗಳ ಸಮುದಾಯ ಭವನಗಳಿಗೆ ಒಂದು ಕೋಟಿ 6 ಲಕ್ಷ ರೂ.ಗಳನ್ನು ಶಾಸಕರ ಶಿಫಾರಸ್ಸಿನಂತೆ ಬಿಡುಗಡೆಗೊಂಡಿರುವ ಬಗ್ಗೆಯೂ ತಿಳಿಸಿದರು. ಹಿಂದುಳಿದ ವರ್ಗಗಳ ಸಮಾಜಗಳಿಗೆ ಹಿಂದಿನ ಯಾವುದೇ ಪಕ್ಷವು ಅಧಿಕಾರ ಮಾಡಿದ ಸಂಧರ್ಭದಲ್ಲಿ ನೀಡಿರಲಿಲ್ಲ. ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಭರಪೂರ ಕೊಡುಗೆಗಳನ್ನು ನೀಡಿದ್ದು, ಇದು ಇತಿಹಾಸದಲ್ಲಿ ದಾಖಲೆಯಾಗಬೇಕಾದ ವಿಷಯ ಎಂದು ಹೇಳಿದರು.
ಬೂತ್‍ಮಟ್ಟದಲ್ಲಿ ಕ್ರೀಯಾಶೀಲರಾಗಿ : ಎಂ.ವೈ.ರುದ್ರೇಶ್
ಬಿಜೆಪಿಯಲ್ಲಿ ಹಿಂದುಳಿದ ವರ್ಗದವರಿಗೆ ಬಾರೀ ಪ್ರಾಮುಖ್ಯತೆ ನೀಡಿ, ಪಕ್ಷ ಹಾಗೂ ಅಧಿಕಾರ ನೀಡಿದೆ. ಸ್ವಯಂ ಪ್ರಧಾನಿ ನರೇಂದ್ರಮೋದಿರವರೇ ಹಿಂದುಳಿದ ವರ್ಗಕ್ಕೆ ಸೇರಿದ್ದು, ಹಿಂದುಳಿದವರ ಶ್ರೇಯೋಭಿವೃದ್ಧಿಗೆ ಬಾರೀ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಂ.ವೈ.ರುದ್ರೇಶ್ ಮಾಹಿತಿ ನೀಡಿ, ಒಬಿಸಿ ಮೋರ್ಚಾದ ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಪ್ರತಿ ಬೂತ್‍ಮಟ್ಟದಲ್ಲೂ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ವೇದಿಕೆಯಲ್ಲಿ ಒಬಿಸಿ ಮೋರ್ಚಾ ತುಮಕೂರು ಜಿಲ್ಲಾ ಪ್ರಧಾನಕಾರ್ಯದರ್ಶಿಗಳಾದ ಗೋಕುಲ್ ಮಂಜುನಾಥ, ಮತ್ತು ಕೆ.ವೇದಮೂರ್ತಿ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಬಿಜೆಪಿ ತುಮಕೂರು ಒಬಿಸಿ ಉಪಾಧ್ಯಕ್ಷರಾದ ಜಯರಾಮಯ್ಯ, ದೊಡ್ಡಯ್ಯ, ಮೋಹನ್ ರಾವತ್, ವೆಂಕಟೇಶ್,
ಕಾರ್ಯದರ್ಶಿಗಳಾದ ರವಿಶಂಕರ್, ಅನಿಲ್, ಹರೀಶ್, ಟೈಲರ್ ಗಂಗಣ್ಣ, ರಂಗಪ್ಪ, ಪ್ರಮುಖ ಕಾರ್ಯಕರ್ತರಾದ ರಾಮುಚಿನ್ನಯ್ಯ, ದಕ್ಷಿಣಾಚಾರ್, ನಾಗೇಶ್ ಮುಂತಾದವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಬಿಜೆಪಿ ತುಮಕೂರು ನಗರ ಒಬಿಸಿ ಪ್ರಧಾನಕಾರ್ಯದರ್ಶಿ ರಂಗನಾಥ್ ವರದಿ ನೀಡಿದರು, ನಗರ ಒಬಿಸಿ ಮೋರ್ಚಾ ಕಾರ್ಯದರ್ಶಿ ಗೋಪಾಲ್ ಸ್ವಾಗತಿಸಿದರೆ, ನಗರ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಉಪೇಂದ್ರಕುಮಾರ್ ಕಾರ್ಯಕ್ರಮ ನಿರೂಪಿಸಿದರು. ನಗರ ಒಬಿಸಿ ಮೋರ್ಚಾ ಕಾರ್ಯದರ್ಶಿ ದೇವರಾಜು ವಂದಿಸಿದರು.