ತುರುವೇಕೆರೆ:

      ಪ್ರತಿಯೊಬ್ಬ ಮನುಷ್ಯನೂ ಈ ಸಮಾಜದ ಪ್ರತ್ಯಕ್ಷ ಅಥವಾ ಪರೋಕ್ಷ ಕೊಡುಗೆಗಳಿಂದಲೇ ಅಭಿವೃದ್ಧಿ ಹೊಂದಿರುತ್ತಾನೆ. ಸಮಾಜದಿಂದ ಪಡೆದದ್ದನ್ನು ವಾಪಸ್ ಸಮಾಜಕ್ಕೆ ಕೊಡುವ ಬಾಧ್ಯತೆ ಅವನ ಮೇಲಿರುತ್ತದೆ. ಇಂತದೊಂದು ಋಣ ಸಂದಾಯದಿಂದ ಮಾತ್ರವೇ ಸಮುದಾಯವೊಂದು ಗುಣಾತ್ಮಕವಾಗಿ ಬೆಳೆಯಲು ಸಾಧ್ಯ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ಅಭಿಪ್ರಾಯಪಟ್ಟರು.

      ತಾಲ್ಲೂಕಿನ ಬೋಚಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪಾಠೋಪಕರಣಗಳು ಮತ್ತು ಪೀಠೋಪಕರಣಗಳನ್ನು ಕೊಡುಗೆ ನೀಡಿದ ಕಲ್ಕೆರೆ ರಘು ಅವರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

      ಮಕ್ಕಳು ಆಧುನಿಕತೆ ಮತ್ತು ಪಾಶ್ಚಿಮಾತ್ಯ ನಾಗರಿಕತೆಯ ಪ್ರಭಾವಕ್ಕೊಳಗಾಗಿ ನಮ್ಮ ಸಂಸ್ಕøತಿ ಪರಂಪರೆಯ ಸೊಗಡನ್ನೇ ಮರೆಯುತ್ತಿದ್ದಾರೆ. ನಮ್ಮ ಸಂಸ್ಕøತಿಯ ಉದಾತ್ತ ಮೌಲ್ಯಗಳು ಇಂದು ಮೂಲೆಗುಂಪಾಗುತ್ತಿವೆ. ಹೀಗಾಗಿ ಸೇವೆ, ನಿಸ್ವಾರ್ಥತೆ ಮತ್ತು ಋಣಸಂದಾಯದ ಮನೋಭಾವದ ಬದಲು ಸ್ವಾರ್ಥ,ಐಶರಾಮಿ ಬದುಕಿನ ವೈಭೋಗವೇ ತುಂಬಿ ತುಳುಕುತ್ತಿವೆ. ಯುವಪೀಳಿಗೆಯನ್ನು ಮರಳಿ ಮೌಲ್ಯಗಳೆಡೆಗೆ ತಂದು ಸಮಾಜಮುಖಿಯನ್ನಾಗಿಸಲು ಕಲ್ಕೆರೆ ರಘು ಅಂತಹವರು ಅನುಕರಣೀಯ ಮಾದರಿ ಆಗಿದ್ದಾರೆ ಎಂದರು.

      ಸಮೂಹ ಸಂಪನ್ಮೂಲ ಅಧಿಕಾರಿ ಶಿವಣ್ಣ ಮಾತನಾಡಿ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಿಗೆ ಗರಿಷ್ಠ ಸೌಲಭ್ಯಗಳನ್ನು ನೀಡುತ್ತಿದೆ. ರಘು ಅವರಂತೆ ದಾನಿಗಳ ಮೂಲಕ ಸಮುದಾಯದ ಸಹಕಾರವೂ ಸಿಕ್ಕರೆ ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳೊಂದಿಗೆ ಸ್ಪರ್ಧಿಸಿ ಮಕ್ಕಳಿಗೆ ಇನ್ನೂ ಹೆಚ್ಚಿನ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

      ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕಲ್ಕೆರೆ ರಘು’ ಭೌಗೋಳಿಕ ವ್ಯತ್ಯಾಸ, ನಗರೀಕರಣದ ಪ್ರಭಾವ ಮತ್ತು ತಾರತಮ್ಯ ನೀತಿಯಿಂದಾಗಿ ಗ್ರಾಮಾಂತರ ಪ್ರದೇಶದ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಬಾರದು. ಗಡಿ ಭಾಗದ ಶಾಲೆಗಳು ಹೆಚ್ಚಾಗಿ ನಿರ್ಲಕ್ಷ್ಯಕ್ಕೊಳಗಾಗುತ್ತವೆ. ಹಾಗಾಗಿ ಈ ಶಾಲೆಗಳ ಪುನಶ್ಚೇತನಗೊಳಿಸಲು ಪ್ರಯತ್ನ ನಡೆಸಲಾಗುತ್ತಿದೆ. ಮಕ್ಕಳು ಸವಲತ್ತುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಸಮಾರಂಭದಲ್ಲಿ ಕಲ್ಕೆರೆ ರಘು ಅವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು.

      ಗ್ರಾ.ಪಂ.ಸದಸ್ಯ ರಾಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಸದಸ್ಯ ಮೋಹನ್ ಕುಮಾರ್, ಎಸ್‍ಡಿಎಂಸಿ ಅಧ್ಯಕ್ಷ ಸುದರ್ಶನ್, ಉಪಾಧ್ಯಕ್ಷ ವೆಂಕಟೇಶ್, ಬಿಜೆಪಿ ಯುವ ಮುಖಂಡ ಚಿದಾನಂದ್, ಮುಖ್ಯೋಪಾಧ್ಯಾಯಿನಿ ನಳಿನಾಕ್ಷಿ,ಪರಿಸರವಾದಿ ಯತೀಶ್ ಇತರರು ಉಪಸ್ಥಿತರಿದ್ದರು. ಸಹಶಿಕ್ಷಕ ಮುದ್ದಹನುಮಯ್ಯ ಸ್ವಾಗತಿಸಿದರು. ಸಂತೋಷ್ ವಂದಿಸಿದರು. ಸಹ ಶಿಕ್ಷಕಿ ಪುಷ್ಪಲತಾ, ರಮ್ಯ ಕಾರ್ಯಕ್ರಮ ನಿರೂಪಿಸಿದರು.

(Visited 40 times, 1 visits today)