ತುಮಕೂರು


ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಸಂವಿಧಾನದ ಆಶಯವನ್ನು ಪ್ರತಿಪಾದಿಸುವ ಅಣ್ಣ ಬಸವಣ್ಣ ಅವರ ವಚನಗಳು ಇಂದಿಗೂ ಪ್ರಸ್ತುತ ಎಂದು ಬೀರನಕಲ್ಲು ಗ್ರಾಮದ ಕಲಾಪ್ರೇಕ್ಷಕ ಈರಣ್ಣ ತಿಳಿಸಿದ್ದಾರೆ.
ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ) ಬೆಳ್ಳಾವೆ ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ತುಮಕೂರು ಗ್ರಾಮಾಂತರದ ಬೀರನಕಲ್ಲು ಗ್ರಾಮದ ವೀರಭದ್ರಸ್ವಾಮಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮೀಣ ನಾಟಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 12 ನೇ ಶತಮಾನದಲ್ಲಿಯೇ ನಾಡಿನ ಎಲ್ಲಾ ಸಮುದಾಯಗಳು ಶಾಂತಿ, ಸೌಹಾರ್ಧತೆ, ಸಹೋದರತ್ವದಿಂದ ಬದುಕುವ ಕನಸು ಕಂಡಿದ್ದ ಬಸವಣ್ಣ, ಕಾಯಕವೇ ಕೈಲಾಸ ಎಂಬ ತತ್ವದ ಮೂಲಕ ಉಳ್ಳುವರಿಂದ ಇಲ್ಲದವರಿಗೆ ಸಂಪತ್ತಿನ ಕೊಡಿಸುವ ಮಹತ್ವದ ಹೆಜ್ಜೆಯನ್ನು ಇಟ್ಟಿದ್ದರು ಎಂದರು.
ಬಸವಣ್ಣನವರು ಕೈಗೊಂಡ ಜಾತಿ ನಿಮೂರ್ಲನೆ, ಅಂತರಜಾತಿಯ ವಿವಾಹ,ಕುಲಕಸುಬುಗಳಿಗೆ ಮನ್ನಣೆ ನೀಡುವ ಮೂಲಕ ಕಾಯಕ ಶ್ರೇಷ್ಠ ಎಂಬ ಸಂದೇಶವನ್ನು ಹೊತ್ತ ಸಂಗಮ ಎಂಬ ನಾಟಕವನ್ನು ಪ್ರದರ್ಶಿಸುವ ಮೂಲಕ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡದ ಕಲಾವಿದರು, ಅನುಭವ ಮಂಟಪದ ಸಾಮಾನ್ಯ ಪರಿಚಯವನ್ನು ಗ್ರಾಮೀಣ ಜನರಿಗೆ ಮೂಡಿಸಿದ್ದಾರೆ. ನಿಜಕ್ಕೂ ಇದೊಂದು ಒಳ್ಳೆಯ ಬೆಳವಣಿಗೆ ಎಂದು ಈರಣ್ಣ ನುಡಿದರು.
ನಿವೃತ್ತ ಪೊಲೀಸರಾದ ರಂಗೇಗೌಡ ಮಾತನಾಡಿ, ನಾವೆಲ್ಲರೂ ಬಸವಣ್ಣನವರು ಹಾಗೆ ಮಾಡಿದರು, ಹೀಗೆ ಮಾಡಿದರು ಎಂದು ಹೇಳುತ್ತೇವೆಯೆ ಹೊರತು ಅವುಗಳನ್ನು ಅನುಸರಿಸುವ ಗೋಜಿಗೆ ಹೋಗುವುದಿಲ್ಲ. ಜಾತಿ, ಮತ, ಪಂಥಗಳ ನಡುವಿನ ಗೋಡೆಗಳನ್ನು ಕೆಡುವಲು ನಿರಂತರ ಪ್ರಯತ್ನಿಸಿದ್ದ ಬಸವಣ್ಣನ ಆಶಯಗಳನ್ನು ನಾವೆಲ್ಲರೂ ಪರಿಪಾಲಿಸಬೇಕಾಗಿದೆ ಎಂದರು.
ವೇದಿಕೆಯಲ್ಲಿ ಸ್ವಾಂದೇನಹಳ್ಳಿ ಗ್ರಾಮಪಂಚಾಯಿತಿಯ ಬೀರನಕಲ್ಲು ಕ್ಷೇತ್ರದ ಸದಸ್ಯರಾದ ಸತೀಶ್,
ಮಂಗಳಮ್ಮ, ಗುತ್ತಿಗೆದಾರರಾದ ತೋಂಟಾರಾಧ್ಯ, ಕಲಾ ಪ್ರೇಕ್ಷಕರಾದ ರಾಜಣ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಗ್ರಾಮೀಣ ಕ್ರಿಯಾತ್ಮಕ ರಂಗ ತಂಡ(ರಿ)ದ ಕಲಾವಿದರಿಂದ ಸಂಗಮ, ದವನ ಭೂಮಿಕೆ ಸಾಂಸ್ಕøತಿಕ ಟ್ರಸ್ಟ್‍ನ ಕಲಾವಿದರು ಕುಡಿತಾಯಣ, ರಂಗಸೊಗಡು ಕಲಾಟ್ರಸ್ಟ್ ನ ಕಲಾವಿದರು ಶುದ್ಧೀಕರಣ ನಾಟಕ ಪ್ರದರ್ಶನಗೊಂಡು ಪ್ರೇಕ್ಷಕರ ಮನಗೆದ್ದವು. ಹಾಸ್ಯ, ವಿಡಂಬನೆ ಮೂಲಕ ಮಹತ್ವದ ವಿಚಾರಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ರಂಗಪ್ರಯೋಗಗಳು ಯಶಸ್ವಿಗೊಂಡವು.

(Visited 1 times, 1 visits today)