ತುಮಕೂರು


ತುಮಕೂರು ಮಹಾನಗರಪಾಲಿಕೆಗೆ ಕಸವಿಲೇವಾರಿಗಾಗಿ 2022ರಲ್ಲಿ ಸ್ವಚ್ಚ ಭಾರತ್ ವಿಷನ್ ಯೋಜನೆಯಡಿ 93 ಮಿನಿ ಟಿಪ್ಪರ್‍ಗಳ ಖರೀದಿಯಲ್ಲಿ ನಿಯಮ ಬಾಹಿರ ವ್ಯವಹಾರ ನಡೆದಿದ್ದು, ಸಾಕಷ್ಟು ಅವ್ಯವಹಾರ ನಡೆದಿರುವ ಶಂಕೆಯಿದ್ದು, ಇಡೀ ಪ್ರಕರಣವನ್ನು ಜಿಲ್ಲಾಡಳಿತ ಲೋಕಾಯುಕ್ತ ತನಿಖೆಗೆ ಒಳಪಡಿಸುವಂತೆ ರಾಷ್ಟ್ರೀಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ಪಡೆಯ ಅಧ್ಯಕ್ಷರಾದ ಜಿ.ಎಸ್.ಬಸವರಾಜು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, 2021 – 22ನೇ ಸಾಲಿನಲ್ಲಿ ಐಎನ್‍ಡಿ 12289ರ ಅಡಿಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಪ್ರತಿ ಮನೆಯಿಂದ ಕಸ ಎತ್ತಲು ಸುಮಾರು 93 ಮಿನಿ ಟಿಪ್ಪರ್ ಖರೀದಿಗೆ ಟೆಂಡರ್ ಕರೆದಿದ್ದು, ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪ್ರೇರಣಾ ಮೋಟಾರ್ಸ್ ಸಂಸ್ಥೆಯವರು ಶಾಮೀಲಾಗಿ, ಕರ್ನಾಟಕ ಪಾರದರ್ಶಕ ಅಧಿನಿಯಮದ ನಿಯಮಗಳನ್ನು ಗಾಳಿಗೆ ತೂರಿ ಕೋಟ್ಯಾಂತರ ರೂ ಅವ್ಯವಹಾರ ನಡೆಸಿದ್ದಾರೆ. 20 ಸಾವಿರಕ್ಕಿಂತ ಅಧಿಕ ಖರೀದಿಗೆ ಕನಿಷ್ಠ ಮೂರು ಕಂಪನಿಗಳಿಂದ ಕೊಟೇಷನ್ ಪಡೆಯಬೇಕು ಎಂಬ ನಿಯಮವಿದ್ದರೂ ಟಾಟಾ ವಾಹನಗಳನ್ನು ಮಾರಾಟ ಮಾಡುವ ದಾಬಸ್‍ಪೇಟೆಯಲ್ಲಿರುವ ಪ್ರೇರಣಾ ಮೋಟಾರ್ ಸಂಸ್ಥೆಗೆ ಮಾತ್ರ ನೆರವಾಗುವಂತೆ ಒಂದೇ ಕೋಟೆಷನ್ ಪಡೆದು, ಒಂದು ವಾಹನಕ್ಕೆ 1.20 ಲಕ್ಷ ರೂ ಹೆಚ್ಚುವರಿ ಹಣ ನೀಡಿ ಮೋಸ ಮಾಡಲಾಗಿದೆ ಎಂದು ತಾವು ಆರ್.ಟಿ.ಐ ಮೂಲಕ ಪಡೆದ ದಾಖಲೆಗಳ ಸಮೇತ ದೂರಿದರು.
ತುಮಕೂರು ನಗರಪಾಲಿಕೆಯ ಪರಿಸರ ಇಂಜಿನಿಯರಿಂಗ್ ವಿಭಾಗದ ಎಇಇ ಯಿಂದ ತಳಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಇದರಲ್ಲಿ ಭಾಗಿಯಾಗಿರುವ ಶಂಕೆ ಇದೆ.ಹಾಗಾಗಿ ಇಂತಹ ದೊಡ್ಡ ಮೊತ್ತದ ಅವ್ಯವಹಾರ ನಡೆದರೂ ಇದುವರೆಗೂ ಒಬ್ಬರು ಬಾಯಿ ಬಿಡುತ್ತಿಲ್ಲ.ಅಲ್ಲದೆ ವಾಹನ ವಾರಟಿ ಅವಧಿಯಲ್ಲಿದ್ದರೂ ಕೆಟ್ಟು ನಿಂತಿರುವ ವಾಹನ ರಿಪೇರಿಗೆ ಹಣ ಬಿಡುಗಡೆ ಮಾಡಲು ಮುಂದಾಗಿರುವುದು ಸಹ ನಮ್ಮ ಗಮನಕ್ಕೆ ಬಂದಿದೆ.ಸದರಿ ವಿಚಾರವಾಗಿ ಆರ್.ಟಿ.ಐ ಮೂಲಕ ಮಾಹಿತಿ ಕೇಳಿದರೆ ಅಧಿಕಾರಿಗಳು ದೃಢೀಕೃತ ಮಾಹಿತಿ ನೀಡದೆ, ಜೆರಾಕ್ಸ್ ಪ್ರತಿ ನೀಡಿದ್ದಾರೆ. ಕೇಳಿದರೆ,ದೃಢೀಕೃತ ಪ್ರತಿ ನೀಡಿ ನಾನು ಮನೆಗೆ ಹೋಗಲೇ ಎಂದು ಹೇಳುತ್ತಿದ್ದಾರೆ.ಅಧಿಕಾರಿಗಳ ಈ ಮಾತೇ ಸದರಿ ವಿಚಾರದಲ್ಲಿ ಅವ್ಯವಹಾರ ನಡೆದಿರುವುದಕ್ಕೆ ಸಾಕ್ಷಿಯಾಗಿದ್ದು,ಕೂಡಲೇ ಜಿಲ್ಲಾಧಿಕಾರಿಗಳು ಸದರಿ ವಿಚಾರವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ, ತಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು.ಈ ಸಂಬಂಧವಾಗಿ ರಾಷ್ಟ್ರೀಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ವೇದಿಕೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಿದೆ ಎಂದು ಜಿ.ಎಸ್.ಬಸವರಾಜು ತಿಳಿಸಿದರು.
ರಾಷ್ಟ್ರೀಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ವೇದಿಕೆ ಉಪಾಧ್ಯಕ್ಷ ಜಿ.ಕೆ.ಶ್ರೀನಿವಾಸ್ ಮಾತನಾಡಿ, ತುಮಕೂರು ನಗರದಲ್ಲಿ ಸ್ಮಾರ್ಟ್‍ಸಿಟಿ ಹೆಸರಿನಲ್ಲಿ ಸಾವಿರಾರು ಕೋಟಿ ರೂಗಳ ಕಾಮಗಾರಿ ನಡೆಯುತ್ತಿದ್ದು,ಇದುವರೆಗೂ ಮುಗಿದಿರುವ ಕಾಮಗಾರಿಗಳಿಗೆ ಒಂದಕ್ಕೂ ನಾಮಫಲಕ,ಖರ್ಚಿನ ಫಲಕ ಹಾಕಿಲ್ಲ.ಕೇಳಿದರೆ ಒಟ್ಟಾರೆ ಪ್ಯಾಕೇಜ್ ಲೆಕ್ಕದಲ್ಲಿ ಮಾಹಿತಿ ನೀಡಲಾಗುತ್ತಿದೆ.ಹಾಗಾಗಿ ಪ್ರತಿ ಕಾಮಗಾರಿ ಸ್ಥಳದಲ್ಲಿ ನಾಮಫಲಕ ಅಳವಡಿಸಬೇಕೆಂಬುದು ನಾಗರಿಕರ ಆಗ್ರಹವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಮತ್ತು ಪರಿಸರ ಸಂರಕ್ಷಣಾ ಪಡೆಯ ನಿರ್ದೇಶಕಿ ಶ್ರೀಮತಿ ಬಿಂದು ಶಿವಕುಮಾರ್ ಉಪಸ್ಥಿತರಿದ್ದರು.

(Visited 1 times, 1 visits today)