ತುಮಕೂರು
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜನವರಿ 26ರಂದು ರಾಷ್ಟ್ರೀಯ ಹಬ್ಬ ಗಣರಾಜ್ಯೋತ್ಸವವನ್ನು ಸಂಭ್ರಮ-ಸಡಗರದಿಂದ ಆಚರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.
ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜನವರಿ 26ರ ಗಣರಾಜ್ಯೋತ್ಸವದಂದು ಬೆಳಿಗ್ಗೆ 9 ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನೆರವೇರಲಿದ್ದು, ಧ್ವಜಾರೋಹಣ ಮಾಡುವ ಸ್ಥಳದ ಸುತ್ತಮುತ್ತ ಸ್ವಚ್ಛತೆ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಕ್ರಮದಲ್ಲಿ ಎನ್ಸಿಸಿ, ಅಗ್ನಿಶಾಮಕ, ಪೊಲೀಸ್ ಇಲಾಖೆ, ಸ್ಕೌಟ್ಸ್ ಮತ್ತು ಗೈಡ್ಸ್, ಅರಣ್ಯ ಇಲಾಖೆ, ಗೃಹರಕ್ಷಕದಳದವರಿಂದ ಆಕರ್ಷಕ ಕವಾಯತು ಏರ್ಪಡಿಸಬೇಕು. ಕವಾಯತಿಗಾಗಿ ತಾಲೀಮು ನಡೆಸಲು ಅನುವಾಗುವಂತೆ ಧೂಳು ಬಾರದ ರೀತಿಯಲ್ಲಿ ನೀರು ಸಿಂಪಡಿಸಿ ಮೈದಾನವನ್ನು ಅಣಿಗೊಳಿಸಬೇಕು ಎಂದು ಸೂಚನೆ ನೀಡಿದರು.
ವೇದಿಕೆ ನಿರ್ಮಾಣ, ಬ್ಯಾರಿಕೇಡ್, ಬ್ಯಾಕ್ ಡ್ರಾಪ್, ಧ್ವಜ ಸ್ತಂಭ ನಿರ್ಮಾಣವನ್ನು ಲೋಕೋಪಯೋಗಿ ಇಲಾಖೆಗೆ ಹಾಗೂ ಆಸನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಹಾನಗರಪಾಲಿಕೆಗೆ ನಿರ್ದೇಶನ ನೀಡಿದರಲ್ಲದೆ, ವೇದಿಕೆ ಸುತ್ತಮುತ್ತ ಹೂಕುಂಡಗಳಿಂದ ಅಲಂಕರಿಸಬೇಕೆಂದು ತೋಟಗಾರಿಕೆ ಇಲಾಖೆಗೆ ಹಾಗೂ ನಿರಂತರ ವಿದ್ಯುತ್ ಸರಬರಾಜು ಮಾಡಲು ಬೆಸ್ಕಾಂ ಇಲಾಖೆಗೆ ಸೂಚಿಸಿದರು.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಸ್ವಾತಂತ್ರ್ಯ ಹೋರಾಟಗಾರರು, ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯ ವ್ಯಕ್ತಿಗಳಿಗೆ ತಲುಪಿಸಬೇಕು. ಯಾವುದೇ ರೀತಿ ಚ್ಯುತಿ ಬಾರದಂತೆ ಅಚ್ಚುಕಟ್ಟಾಗಿ ಗಣರಾಜ್ಯೋತ್ಸವ ಜರುಗುವಂತೆ ಅಧಿಕಾರಿಗಳು ಶ್ರದ್ಧೆಯಿಂದ ನಮ್ಮ ಮನೆಯ ಹಬ್ಬದ ರೀತಿಯಲ್ಲಿ
ಆಚರಿಸುವಂತೆ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಇಲಾಖಾ ಮುಖ್ಯಸ್ಥರು ತಮ್ಮ ಕಚೇರಿಗಳಲ್ಲಿ ನಿಯಮದನ್ವಯ ಧ್ವಜಾರೋಹಣ ನೆರವೇರಿಸಬೇಕು. ಹರಿದ, ಹಳೆಯ ಧ್ವಜಗಳನ್ನು ಹಾರಿಸಬಾರದು ಎಂದು ನಿರ್ದೇಶಿಸಿದರು.
ನಂತರ ಸಭೆಯಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರ/ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿದ 15 ಸಾಧಕರಿಗೆ ಸನ್ಮಾನಿಸಿ ಗೌರವಿಸುವ ಬಗ್ಗೆ ಚರ್ಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮೋಹನ್ ಕುಮಾರ್, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಪಾಲಿಕೆ ಆಯುಕ್ತ ಯೋಗಾನಂದ, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗೋಪಾಲ್ ಜಾದವ್, ಕಾರ್ಮಿಕ ಅಧಿಕಾರಿ ಹೆಚ್.ಎನ್.ರಮೇಶ್, ನಿರ್ಮಿತಿ ಕೇಂದ್ರದ ರಾಜಶೇಖರ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಂಜನಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಮಂಜುನಾಥ್, ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ: ವೀಣಾ, ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕಿ ಸರೋಜಮ್ಮ, ಬೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಶಾಂತ್ ಕೂಡ್ಲಿಗಿ, ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ: ಜಯಣ್ಣ, ಯುವ ಸಬಲೀಕರಣ ಇಲಾಖೆ ಸಹಾಯಕ ನಿದೇಶಕ ನಾಗರಾಜು ಭಾಗವಹಿಸಿದ್ದರು.