ತುಮಕೂರು


ನಾಲ್ಕು ಗೋಡೆಗಳ ನಡುವಿನ ಜೀವನ ಮುಗಿಸಿ ಮಾಸ್ಟರ್ಸ್ ಆಗಲು ಹೊರಟಿರುವ ವಿದ್ಯಾರ್ಥಿಗಳು ಅಬ್ದುಲ್ ಕಲಾಂ, ಸ್ವಾಮಿ ವಿವೇಕಾನಂದರ ಜೀವನಾದರ್ಶ, ವ್ಯಕ್ತಿತ್ವ, ತತ್ವ್ತ, ಆತ್ಮವಿಶ್ವಾಸ, ನಡವಳಿಕೆ, ಆಲೋಚನೆ, ಸರಿ ಆಯ್ಕೆಗಳನ್ನು ಅಳವಡಿಸಿಕೊಂಡರೆ ಅದುವೇ ನಿಮ್ಮ ಬೆಳವಣಿಗೆಯ ಮೇಲೆ ಪ್ರಭಾವ ಬೀರಲಿದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ವೀರೇಶಾನಂದ ಸರಸ್ವತಿ ಸ್ವಾಮಿಗಳು ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನ ಘಟಕ ಐ.ಕ್ಯೂ.ಎ.ಸಿ. ಮತ್ತು ಪಿ.ಎಂ.ಇ.ಬಿ. ವಿಭಾಗಗಳ ವತಿಯಿಂದ ಬುಧವಾರ ಆಯೋಜಿಸಿದ್ದ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳ ಸ್ವಾಗತ ‘ಅನಿಕೇತನ’ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.
ಸಮಾಜ ಸೇವೆ ಎಂಬುದು ಋಣಸಂದಾಯವಿದ್ದಂತೆ ಎಂಬ ವಿವೇಕಾನಂದರ ಮಾತುಗಳನ್ನು ನಾವು ಮರೆಯಬಾರದು. ಯೌವ್ವನ ಎಂದರೆ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ನೈತಿಕವಾಗಿ ಸದೃಢರೂ ಸಬಲರೂ ಆಗಿರುವ ವಯೋಮಾನ. ಇವೆಲ್ಲವೂ ಸಕಾರಾತ್ಮಕವಾಗಿ ಬಳಕೆಯಾಗುವುದು ಶಿಕ್ಷಣದಿಂದ. ಪ್ರಬುದ್ಧ ಹಾಗೂ ಪ್ರಜಾಪ್ರಭುತ್ವ ರಾಷ್ಟ್ರ ಕಟ್ಟಲು ಶಿಕ್ಷಣದಿಂದ ಮಾತ್ರವೇ ಸಾಧ್ಯ ಎಂದರು.
ಸಕಾರಾತ್ಮಕ ಚಿಂತನೆಗಳಿಂದಷ್ಟೇ ಬದುಕು ಕಟ್ಟಲು ಸಾಧ್ಯ. ಸತ್ಯದ ಬಗ್ಗೆ ಕನಸುಕಟ್ಟಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಅವಕಾಶ ವಂಚಿತರಾಗದೆಯೇ, ಅದ್ಭುತ ದೃಷ್ಟಿಕೋನದ ಶಿಕ್ಷಣಕ್ಕೆ ಬೆಲೆಕೊಟ್ಟು, ಶಿಕ್ಷಣದ ನಿಜವಾದ ಉದ್ದೇಶ ತಿಳಿದುಕೊಂಡಾಗಲೇ ಪ್ರತಿಯೊಬ್ಬರೂ ವಿಕಸನಗೊಳ್ಳುವುದು ಎಂದು ತಿಳಿಸಿದರು.
ಭಾವನಾತ್ಮಕ ಬೌದ್ಧಿಕ ಸಾಮಾಜಿಕ ಸಂಬಂಧ ಬದುಕು ರೂಪಿಸುತ್ತದೆ. ತಾಯಿ ಮೊದಲ ಗುರುವಾದರೆ, ಶಿಕ್ಷಕ ಪೂರ್ಣ ಬದುಕಿನ ಗುರುವಾಗುತ್ತಾನೆ. ಶಿಕ್ಷಣ ಸಂಬಂಧಗಳು ಜೀವನದ ಕುರಿತು ಸ್ವಾಮಿ ವಿವೇಕಾನಂದರು ಹೇಳಿರುವ ವಿಚಾರಗಳನ್ನು ವಿದ್ಯಾರ್ಥಿಗಳು ಅರಿತು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಲ್ಲಿ ಸ್ಫೂರ್ತಿ ತುಂಬಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕುಲಸಚಿವ (ಪ್ರಭಾರ) ಪ್ರೊ. ಕೇಶವ ಮಾತನಾಡಿ, ಅಸ್ತಿತ್ವ ಮತ್ತು ಜ್ಞಾನವೇ ಅನಂತ ಮಾರ್ಗ. ನಮ್ಮ ವಿಶ್ವವಿದ್ಯಾನಿಲಯದ ಸಂಪನ್ಮೂಲಗಳನ್ನು ಬಳಸಿಕೊಂಡು ಸಾಧನೆ ಮಾಡಿ. ಮುಂದಿನ ಎರಡು ವರ್ಷ ನಿಮ್ಮ ಭವಿಷ್ಯ ರೂಪಿಸಿಕೊಳ್ಳುವುದರಲ್ಲಿ ನಮ್ಮ ಸಂಸ್ಥೆ ಮೈಲಿಗಲ್ಲಾಗಲಿ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪೆÇ್ರ. ಎಂ. ವೆಂಕಟೇಶ್ವರಲು, ನೂರಾರು ಕನಸುಗಳನ್ನು ಹೊತ್ತು ನಮ್ಮ ಸಂಸ್ಥೆಗೆ ಸೇರಿದ್ದೀರಿ. ವಿಶ್ವವಿದ್ಯಾನಿಲಯದ ಘನತೆ, ಗೌರವ, ಶಿಸ್ತು ಕಾಪಾಡುವಲ್ಲಿ ಹಿಂದೆ ಬೀಳಬೇಡಿ. ಎಲ್ಲಾ ವಿದ್ಯಾರ್ಥಿಗಳಿಗೂ ನಾವೇ ಪೋಷಕರು. ನಿಮ್ಮ ತಪ್ಪುಗಳನ್ನು ಸರಿಪಡಿಸಿ, ಸರಿದಾರಿಯತ್ತ ಕೊಂಡೊಯ್ಯುವಲ್ಲಿ, ಸಮಾಜಮುಖಿ ಶಿಲ್ಪಿಗಳಾಗಿ ನಿಮ್ಮನ್ನು ರೂಪಿಸುವಲ್ಲಿ ನಮ್ಮ ಶಿಕ್ಷಕರು ಹಗಲಿರುಳು ಶ್ರಮಿಸುತ್ತಾರೆ. ಹಾಗಾಗಿ, ವಿದ್ಯಾರ್ಥಿಗಳೆಲ್ಲರೂ ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ತುಮಕೂರು ವಿವಿಯ ಮೌಲ್ಯಮಾಪನ ಕುಲಸಚಿವ ಡಾ. ಪ್ರಸನ್ನ ಕುಮಾರ್ ಕೆ., ವಿದ್ಯಾರ್ಥಿ ಕ್ಷೇಮಪಾಲನ ಘಟಕದ ನಿರ್ದೇಶಕ ಪೆÇ್ರ. ಪಿ. ಪರಮಶಿವಯ್ಯ, ಐ.ಕ್ಯೂ.ಎ.ಸಿ. ನಿರ್ದೇಶಕ ಡಾ. ರಮೇಶ್ ಬಿ., ಪಿ.ಎಂ.ಇ.ಬಿ ನಿರ್ದೇಶಕ ಡಾ. ಬಿ. ಟಿ. ಸಂಪತ್ ಕುಮಾರ್, ಸ್ನಾತಕೋತ್ತರ ವಿಭಾಗಗಳ ಅಧ್ಯಾಪಕರು ಹಾಗೂ ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ. ರೂಪೇಶ್ ಕುಮಾರ್ ಎ. ನಿರೂಪಿಸಿದರು.

(Visited 1 times, 1 visits today)