ತುಮಕೂರು


ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಗ್ರಾಮೀಣ ಭಾಗದಲ್ಲಿ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಒತ್ತಾಯಿಸಿ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ಅವರ ನಿಯೋಗ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಿತು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಗೆ ಗುರುವಾರ ವಿವಿಧ ಕಾಂಗ್ರೆಸ್ ಮುಖಂಡರೊಂದಿಗೆ ಭೇಟಿ ನೀಡಿ ಸಿಇಒ ಅವರೊಂದಿಗೆ ಚರ್ಚಿಸಿದ ಮುರಳೀಧರ ಹಾಲಪ್ಪ ಅವರು, ಗ್ರಾಮೀಣ ಭಾಗದಲ್ಲಿರುವ ಸರ್ಕಾರಿ ಶಾಲೆಗಳ ಕೊಠಡಿಗಳನ್ನು ದುರಸ್ಥಿಗೊಳಿಸಿ ಶಾಲೆಗಳ ಸುತ್ತ ಕಾಂಪೌಂಡ್ ನಿರ್ಮಿಸಬೇಕು ಹಾಗೂ ಹೆಣ್ಣುಮಕ್ಕಳ ಶೌಚಾಲಯಗಳ ಬಗ್ಗೆ ತಕ್ಷಣ ಗಮನ ಹರಿಸಿ ಶೌಚಾಲಯಗಳಿಲ್ಲದ ಶಾಲೆಗಳಿಗೆ ಶೌಚಾಲಯಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿಚಾರಿಸಿದರೆ ಚುನಾವಣೆಯತ್ತ ಬೆರಳು ಮಾಡಿ ತೋರಿಸದೆ, ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ಅನುಷ್ಠಾನಗೊಳಿಸಲು ಜಿಲ್ಲಾ ಪಂಚಾಯತ್ ಅಡಿಯಲ್ಲಿ ಬರುವಂತಹ ಎಲ್ಲಾ ಇಲಾಖೆಗಳಿಗೆ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪಂಚಾಯಿತಿಗೆ ಬರುವ ಯಾವುದಾದರೂ ಯೋಜನೆಗಳಿಗೆ ಬಳಸದೆ ವಾಪಸ್ ಹೋಗುವಂತಹ ಅನುದಾನವನ್ನು ಗ್ರಾಮೀಣ ಪ್ರದೇಶದ ವಸತಿ ಇಲ್ಲದ ಕುಟುಂಬಗಳಿಗೆ ವಸತಿ ಕಲ್ಪಿಸುವ ಹಾಗೂ ಜಮೀನುಗಳಲ್ಲಿ ಬದುಗಳ ನಿರ್ಮಾಣ, ಪಂಚಾಯಿತಿಗಳಲ್ಲಿ ಸಿಬ್ಬಂದಿಗಳ ನೇಮಕ ಸೇರಿದಂತೆ ಇತರೆ ಯೋಜನೆಗಳಿಗೆ ಬಳಸುವಂತೆ ಕಾಂಗ್ರೆಸ್ ಮುಖಂಡ ರೇವಣ ಸಿದ್ಧಯ್ಯ ಜಿಪಂ ಸಿಇಒ ಅವರಿಗೆ ಮನವಿ ಮಾಡಿದರು.
ಇದಕ್ಕೆ ಇತ್ತರಿಸಿದ ಸಿಇಒ ಡಾ.ಕೆ.ವಿದ್ಯಾಕುಮಾರಿ, ನಮ್ಮಲ್ಲಿ ಕುರಿ, ಮೇಕೆ ಶೆಡ್‍ಗಳ ನಿರ್ಮಾಣಕ್ಕೆ ಎಷ್ಟು ಅನುದಾನ ಬೇಕಾದರೂ ಇದೆ. ಇದು ಹೊರತು ಪಡಿಸಿ, ವಾಪಸ್ ಹೋಗುವಂತಹ ಅನುದಾನ ಯಾವುದೂ ಇಲ್ಲ, ಎಲ್ಲವನ್ನೂ ಎಲ್ಲಾ ಯೋಜನೆಗಳಲ್ಲೂ ತೊಡಗಿಸಿಕೊಂಡು ಅಭಿವೃದ್ಧಿ ಪಡಿಸಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲೂ ಸಹ ಈಗಾಗಲೇ ಹೆಚ್ಚುವರಿ ಸಿಬ್ಬಂದಿ ಇದ್ದು, ಅವರಿಗೇ ವೇತನ ನೀಡಲು ಸಾಧ್ಯವಾಗುತ್ತಿಲ್ಲ, ಹೊಸದಾಗಿ ಸಿಬ್ಬಂದಿ ನೇಮಕ ಪ್ರಸ್ತುತ ಸಾಧ್ಯವಿಲ್ಲ ಎಂದು ನುಡಿದರು.
ವೈದ್ಯರಾದ ಡಾ.ಅರುಂಧತಿ ಮಾತನಾಡಿ, ಪಾವಗಡಲ್ಲಿ 7 ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದು, ಮೂರು ಕೇಂದ್ರಗಳಲ್ಲಿ ವೈಧ್ಯರು, ಎಎನ್‍ಎಂಗಳ ಕೊರತೆ ಇದೆ.
ಕೂಡಲೇ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಹೆಚ್ಚಿಸಿ, ಸಿಬ್ಬಂದಿ ನೇಮಕ ಮಾಡಬೇಕೆಂದು ಮನವಿ ಮಾಡಿದರು. ಇದಕ್ಕೆ ಸ್ಪಂಧಿಸಿದ ಸಿಇಒ ಕೂಡಲೇ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪೀಣ್ಯ ಕೈಗಾರಿಕಾ ಕೇಂದ್ರದ ಮಾಜಿ ಛೇರ್ಮೆನ್ ವೆಂಕಟೇಶ್, ಮುಖಂಡರಾದ ನಟರಾಜ್, ರೇವಣ ಸಿದ್ಧಯ್ಯ, ಚಿಕ್ಕನಾಯಕನಹಳ್ಳಿಯ ವೈದ್ಯ ಡಾ.ಪರಮೇಶ್, ಡಾ.ಅರುಂಧತಿ,
ಸಂಜೀವ್‍ಕುಮಾರ್, ನಿವೃತ್ತ ತಹಶೀಲ್ದಾರ್ ಎಂ.ಎನ್. ಹನುಮಂತಯ್ಯ, ಪ್ರಕಾಶ್, ಅಶ್ವತ್ಥನಾರಾಯಣ, ನಾರಾಯಣಪ್ಪ, ಕೃಷ್ಣಮೂರ್ತಿ, ಚನ್ನಿಗಪ್ಪ, ಆದಿಲ್‍ಪಾಷ, ತಾಹೇರಾ, ಚಂದ್ರಕಲಾ ಸೇರಿದಂತೆ ಹಲವರು ಭಾಗವಹಿಸಿದ್ದರು.

(Visited 1 times, 1 visits today)