ತುಮಕೂರು
ಜೀವನದಲ್ಲಿ ಕಣ್ಣಿನ ದೃಷ್ಟಿ ಬಹಳ ಮುಖ್ಯ. ಬದುಕು ಕಾಣಲು, ಜಗತ್ತಿನ ಬೆಳಕು ನೋಡಲು ಕಣ್ಣಿನ ಆರೋಗ್ಯ ಪ್ರತಿಯೊಬ್ಬರಿಗೂ ಅವಶ್ಯಕ. ಪೌಷ್ಠಿಕ ಆಹಾರ ಕಣ್ಣಿನ ಆರೋಗ್ಯದ ಕಾಳಜಿಗೆ ಪೂರಕವಾಗಲಿದೆ. ಕಣ್ಣಿನ ಆರೋಗ್ಯ ಕಾಪಾಡಿಕೊಂಡರೆ ಬದುಕು ಸುಂದರ ಎಂದು ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ. ಗಿರೀಶ್ ರೆಡ್ಡಿ ಜಿ. ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯ ಯುವ ರೆಡ್ ಕ್ರಾಸ್ ಘಟಕ ಹಾಗೂ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ ಇವರ ಸಹಯೋಗದೊಂದಿಗೆ ಗುರುವಾರ ಆಯೋಜಿಸಿದ್ದ ಎರಡು ದಿನದ ‘ಉಚಿತ ನೇತ್ರ ತಪಾಸಣಾ ಶಿಬಿರ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡಿಜಿಟಲ್ ಯುಗದಲ್ಲಿ ತಾಂತ್ರಿಕ ಕೆಲಸಗಳಿಂದಾಗಿ ಸದಾ ಕಂಪ್ಯೂಟರ್, ಮೊಬೈಲ್ ಫೋನ್ ಬಳಕೆಯಿಂದಾಗಿ ಯುವಕರಲ್ಲಿ ಕಣ್ಣಿನ ಸಮಸ್ಯೆ ಬಹಳವಾಗಿ ಕಾಡುತ್ತಿದೆ. ಕತ್ತಲೆಯಲ್ಲಿ ಡಿಜಿಟಲ್ ಸ್ಕ್ರೀನ್ ಬಳಕೆಯಿಂದಾಗಿ ಕಣ್ಣಿನ ಆರೋಗ್ಯ ಹದಗೆಟ್ಟಿದೆ. ಕಣ್ಣಿನ ಆರೋಗ್ಯ ಕಾಪಾಡಲು ಆಹಾರ, ಚಟುವಟಿಕೆ ಹಾಗೂ ನಮ್ಮ ಅಭ್ಯಾಸಗಳಿಂದಷ್ಟೇ ಸಾಧ್ಯ ಎಂದರು.
ತುಮಕೂರು ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವ ಪೆÇ್ರ. ಪ್ರಸನ್ನ ಕುಮಾರ್ ಮಾತನಾಡಿ, ಒಂದು ಉತ್ತಮ ಉಪನ್ಯಾಸ ಕೇಳುವುದು ಹತ್ತು ಪುಸ್ತಕ ಓದುವುದಕ್ಕೆ ಸಮ. ಹಾಗಾಗಿ, ಈ ಶಿಬಿರದ ಸದುಪಯೋಗ ಪಡೆದುಕೊಳ್ಳಿ ಎಂದರು.
ತುಮಕೂರು ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಶೇಟ್ ಪ್ರಕಾಶ್ ಮಾತನಾಡಿ, ಕಣ್ಣಿನ ಆರೋಗ್ಯದ ಅರಿವು ವಿದ್ಯಾರ್ಥಿಗಳಿಗಿಲ್ಲ. ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕಣ್ಣಿನ ಆರೋಗ್ಯದ ಕಾಳಜಿ ಮುಖ್ಯ. ಈ ಶಿಬಿರದ ಮುಖೇನ ಕಣ್ಣಿನ ಆರೋಗ್ಯದ ಅರಿವಾಗಲಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಯುವ ರೆಡ್ ಕ್ರಾಸ್ ಘಟಕದ ಸಂಯೋಜಕಿ ಡಾ. ರಶ್ಮಿ ಹೊಸಮನಿ, ಡಾ. ಹೆಚ್. ಎಂ. ಲಲಿತ, ಡಾ. ಪರಿಮಳ ಬಿ. ಭಾಗವಹಿಸಿದ್ದರು.