ತುಮಕೂರು


ನಮ್ಮ ಶಿಕ್ಷಣ ಪದ್ದತಿ, ಉಪಯೋಗಿಸಿ ಬಿಸಾಡುವ ಆಲೋಚನಾ ಕ್ರಮಗಳು ಪರಿಸರದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿದ್ದು, ಮರು ಬಳಕೆ ಮಾಡುವಂತಹ ಪದ್ದತಿಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕಿದೆ ಎಂದು
ಆದಮ್ಯ ಚೇತನ ಸಂಸ್ಥೆಯ ಅಧ್ಯಕ್ಷೆ ಡಾ.ತೇಜಸ್ವಿನಿ ಆನಂತಕುಮಾರ್ ತಿಳಿಸಿದ್ದಾರೆ.
ನಗರದ ಗಾಜಿನಮನೆಯಲ್ಲಿ ಸ್ವದೇಶಿ ಜಾಗರಣ್ ಮಂಚ್ ವತಿಯಿಂದ ಜನವರಿ 18 ರಿಂದ 22ವರೆಗೆ ಆಯೋಜಿಸಿರುವ ಸ್ವದೇಶಿ ಮೇಳವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು,ಜಾಗತೀಕರಣದ ಫಲವಾಗಿ ನಮ್ಮನ್ನು ಆವರಿಸಿಕೊಂಡಿರುವ ವಿದೇಶಿ ವ್ಯಾಮೋಹವನ್ನು ಕಳಚಿ, ಭಾರತೀಯ ಪದ್ದತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಸ್ವದೇಶಿ ಜಾಗರಣ್ ಮಂಚ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ತುಮಕೂರು ಮೇಯರ್ ಶ್ರೀಮತಿ ಪ್ರಭಾವತಿ ಸುಧೀಶ್ವರ್ ಮಾತನಾಡಿ,ಭತ್ತಕುಟ್ಟಿ,ರಾಗಿ ಬೀಸಿ ಕಾರ್ಯಕ್ರಮ ಉದ್ಘಾಟಿಸಿ ದ್ದರಿಂದ ನನ್ನ ಬಾಲ್ಯ ಜ್ಞಾಪಕಕ್ಕೆ ಬಂತು.ನಾನು ಮದುವೆಯಾಗಿ ಬಂದ ನಂತರವು ನಮ್ಮ ಅತ್ತೆ ನಮಗೆ ಭತ್ತ ಕುಟ್ಟುವುದು, ರಾಗಿ ಬೀಸುವುದನ್ನು,ಹಿಟ್ಟು ರುಬ್ಬುವುದನ್ನು ಹೇಳಿಕೊಡುತ್ತಿದ್ದರು.ಆತುರದ ಜಗತ್ತಿನಲ್ಲಿ ಇಂದು ಎಲ್ಲವನ್ನು ಬಿಟ್ಟು ಹಲವಾರು ರೋಗ ರುಜೀನಗಳಿಗೆ ತುತ್ತಾಗುತ್ತಿದ್ದೇವೆ.ಇದನ್ನು ತಡೆಯುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕಿದೆ ಎಂದರು.
ಕಾರ್ಯಕ್ರಮದ ಪ್ರಧಾನ ಭಾಷಣ ಮಾಡಿದ ಚಕ್ರವರ್ತಿ ಸೂಲಿಬೆಲೆ,ಸ್ವದೇಶಿ ಎಂಬುದು ಗಾಂಧೀಜಿಯವರ ಪರಿಕಲ್ಪನೆ ಯಾಗಿದೆ.ಯಾವುದು ಭೌಗೋಳಿಕವಾಗಿ ಹತ್ತಿರದಲ್ಲಿ ಯಾವುದು ತಯಾರಾಗುತ್ತೋ ಅದನ್ನು ಸ್ವದೇಶಿ ಎನ್ನಬಹುದು. ಇದನ್ನು ಹಿಂದೂ ಏಕಾನಮಿ ಎಂಬ ಪರಿಕಲ್ಪನೆಯಲ್ಲಿ ಕಾಣಬಹುದಾಗಿದೆ.ವಿದೇಶಿಯರು ಏಕಾನಮಿ ಎಂಬ ಶಬ್ದ ಬಳಸುವ ಮುನ್ನ,ಋಗ್ವೇದ ಕಾಲದಲ್ಲಿಯೇ ಅರ್ಥಶಾಸ್ತ್ರದ ಪರಿಚಯ ಭಾರತೀಯರಿಗೆ ಇತ್ತು.ಅದು ಈಗಿನ ಪೆಂಟೆಂಟ್ ರೀತಿಯ ಕೇಂದ್ರೀಕೃತವಲ್ಲದೆ,ಆರೋಗ್ಯಕರ ಪೈಪೋಟಿಯಿಂದ ಕೂಡಿದ ವಿಕೇಂದ್ರೀಕೃತ ವ್ಯವಸ್ಥೆಯಿಂದ ಕೂಡಿತ್ತು.ಸರಕಾರ ನೀಡುವ ಉಚಿತ ಪಡಿತರ,ನಗದು ಇವುಗಳಿಗೆ ಕಾಯುವಂತಹ ಏಕಾನಮಿ ಹಿಂದೂ ಏಕಾನಮಿ ಅಲ್ಲ,ಪ್ರಿಯಾಂಕ ಗಾಂಧಿ ಘೋಷಿಸಿದ ಎರಡು ಸಾವಿರ ಭೀಕ್ಷೆಗೆ ಕಾಯುವಂತಹ ಪರಾವಲಂಬಿ ಅರ್ಥಿಕತೆ ನಮ್ಮದಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ತುಮಕೂರು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಮಾತನಾಡಿ,
ಸ್ವದೇಶಿ ಮೇಳಗಳ ಮೂಲಕ ದೇಶದ ಗುಡಿ ಕೈಗಾರಿಕೆಗಳ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.
ಈ ನಿಟ್ಟಿನಲ್ಲಿ ಸ್ವದೇಶಿ ಜಾಗರಣ್ ಮಂಚ್ ಒಳ್ಳೆಯ ಕೆಲಸ ಮಾಡುತ್ತಿದ್ದು, ಮತ್ತಷ್ಟು ಹೆಚ್ಚು ಜನರನ್ನು ತಲುಪುವಂತಾಗಲಿ ಎಂದರು.
ಕಾರ್ಯಕ್ರಮದಲ್ಲಿ ಸ್ವದೇಶಿ ಜಾಗರಣ್ ಮಂಚ್‍ನ ಸಂಘಟಕ ಆ.ನ.ಲಿಂಗಪ್ಪ,ಸಂಯೋಜಕರಾದ ಜಿ.ಕೆ.ವಾಸವಿಗುಪ್ತ, ಸಂಚಾಲಕರಾದ ಚೈತ್ರ ಮಂಜುನಾಥ್,ರಮ್ಯ, ಲಕ್ಷ್ಮಿ,
ಸಂಯೋಜಕರಾದ ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

(Visited 2 times, 1 visits today)