ಕೊರಟಗೆರೆ
ಗಡ್ಡೋಬನಹಳ್ಳಿ ಗ್ರಾಮಸ್ಥರ ಮನವಿಯ ಮೇರೆಗೆ ನಿವೃತ್ತ ಐಎಎಸ್ ಅಧಿಕಾರಿ ಬಿ.ಹೆಚ್.ಅನಿಲ್‍ಕುಮಾರ್ ತನ್ನ ಸ್ವಂತ ಹಣದಿಂದಲೇ 5ಕೀಮೀ ರಸ್ತೆಯ ಜಂಗಲ್ ದುರಸ್ಥಿ ಕಾಮಗಾರಿಗೆ ಚಾಲನೆ ನೀಡಿರುವ ಘಟನೆ ಬುಧವಾರ ನಡೆದಿದೆ.
ಕೊರಟಗೆರೆ ತಾಲೂಕು ಕೋಳಾಲ ಹೋಬಳಿ ತೀತಾ ಗ್ರಾಪಂ ವ್ಯಾಪ್ತಿಯ ಮೇಳೆಹಳ್ಳಿಯ ಮುಖ್ಯರಸ್ತೆಯಿಂದ ಗಡ್ಡೋಬನಹಳ್ಳಿಗೆ ಸಂಪರ್ಕ ಕಲ್ಪಿಸುವ 5ಕೀಮೀ ರಸ್ತೆಯ ದುರಸ್ಥಿ ಕೆಲಸಕ್ಕೆ ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‍ಕುಮಾರ್ ಮುಂದಾಗಿದ್ದಾರೆ.
ಮೇಳೆಹಳ್ಳಿ ಕ್ರಾಸಿನಿಂದ ಗಡ್ಡೋಬನಹಳ್ಳಿಗೆ 2ಕೀಮೀ ರಸ್ತೆ ಮತ್ತು ಗಡ್ಡೋಬನಹಳ್ಳಿ ಗ್ರಾಮದಿಂದ ಮಧ್ಯವೆಂಕಟಾಪುರ ಕ್ರಾಸಿಗೆ 3ಕೀಮೀ ಸೇರಿ ಒಟ್ಟು 5ಕೀಮೀ ಉದ್ದದ ರಸ್ತೆಯ ದುರಸ್ಥಿತಿ ಕೆಲಸವು ಪ್ರಾರಂಭವಾಗಿದೆ. ಗಡ್ಡೋಬನಹಳ್ಳಿ ಗ್ರಾಮದಲ್ಲಿ ಒಟ್ಟು 90ಮನೆಗಳಿದ್ದು 450ಕ್ಕೂ ಅಧಿಕ ಮತದಾರರು ಇದ್ದಾರೆ. ಪ್ರತಿನಿತ್ಯ 40ಕ್ಕೂ ಅಧಿಕ ವಿದ್ಯಾರ್ಥಿಗಳು ಇದೇ ಮಾರ್ಗವಾಗಿ ಶಾಲಾ ಮತ್ತು ಕಾಲೇಜುಗಳಿಗೆ ತೆರಳುತ್ತಾರೆ.
ಗಡ್ಡೋಬನಹಳ್ಳಿ ಗ್ರಾಮಸ್ಥ ಕಾಮರಾಜು ಮಾತನಾಡಿ ತುಮಕೂರು ಜಿಲ್ಲೆಯಲ್ಲಿಯೇ ಕಾಣದಂತಹ ರಸ್ತೆ ನಮ್ಮೂರಿನಲ್ಲಿ ಸೀಗಲಿದೆ. ಜಂಗಲ್‍ಬೆಳೆದು ಅಪಘಾತವಾಗಿ ಕೈಕಾಲು ಮುರಿದು ಸಾಕಷ್ಟು ಜನ ಮನೆಯಲ್ಲಿ ಇದ್ದಾರೆ. ಜಂಗಲ್‍ಬೆಳೆದು ಸಂಚಾರಕ್ಕೆ ಸಮಸ್ಯೆ ಆಗಿದೆ. ರಾಜಕೀಯ ನಾಯಕರು ಮತ್ತು ಸರಕಾರಿ ಅಧಿಕಾರಿವರ್ಗ ನಮ್ಮೂರನ್ನು ಮರೆತು ಹೋಗಿದ್ದಾರೆ ಎಂದು ಆರೋಪ ಮಾಡಿದರು.
ಗಡ್ಡೋಬನಹಳ್ಳಿ ರೈತ ಚಿಕ್ಕಕಾಮರಾಜು ಮಾತನಾಡಿ ನಮ್ಮೂರಿಗೆ ಬಿಜೆಪಿ ಮುಖಂಡ ಅನಿಲ್‍ಕುಮಾರ್ ಬೇಟಿನೀಡಿದಾಗ ರಸ್ತೆಯ ದುರಸ್ಥಿಯ ಬಗ್ಗೆ ಮನವಿ ಮಾಡಿದ್ದೇವೆ. ನಮ್ಮ ಮನವಿಗೆ ತಕ್ಷಣವೇ ಸ್ಪಂಧಿಸಿ ರಸ್ತೆ ದುರಸ್ಥಿ ಕೆಲಸಕ್ಕೆ ಮುಂದಾಗಿದ್ದಾರೆ.
ರಸ್ತೆ ದುರಸ್ಥಿ ಕೆಲಸದಿಂದ ರೈತಾಪಿವರ್ಗ ಮತ್ತು ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಗ್ರಾಮಸ್ಥರ ಮನವಿಗೆ ತಕ್ಷಣವೇ ಸ್ಪಂಧಿಸಿದ ಕೊರಟಗೆರೆ ಬಿಜೆಪಿ ಮುಖಂಡ ಬಿ.ಹೆಚ್.ಅನಿಲ್‍ಕುಮಾರ್ ಮಾರನೇಯ ದಿನವೇ ಕೆಲಸವನ್ನು ಪ್ರಾರಂಭ ಮಾಡಿದ್ದಾರೆ. ಜೆಸಿಬಿ ಮತ್ತು ಟ್ರಾಕ್ಟರ್ ಬಳಸಿ ಜಂಗಲ್ ಸ್ವಚ್ಚಮಾಡಿ ರಸ್ತೆಗೆ ಹೊಸಮಣ್ಣು ಹಾಕಿಸಿದ್ದಾರೆ. ಬಿಜೆಪಿ ಮುಖಂಡನ ಕಾರ್ಯಕ್ಕೆ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.