ತುಮಕೂರು:
ತುಮಕೂರು ಲೋಕಸಭಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಚತುಷ್ಪಥದ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ದೊರೆತಿದ್ದು, ಡಿ.16ರಂದು ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಮುದ್ದಹನುಮೇಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಮೇಲೆ ಸಾಕಷ್ಟು ಒತ್ತಡ ತಂದಿದ್ದರಿಂದ ನಾಲ್ಕು ನಾಲ್ಕು ಪಥದ ರಸ್ತೆ ಅಭಿವೃದ್ಧಿಗೆ ಮಂಜೂರಾತಿ ಆಗಿದ್ದು, 2032 ಕೋಟಿ ರು ಟೆಂಡರ್ ಆಗಿದೆ. ಮೊದಲ ಮತ್ತು ಎರಡನೇ ಹಂತದ ರಸ್ತೆ ಅಭಿವೃದ್ಧಿಗೆ ಈಗಾಗಲೇ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು.
ತುಮಕೂರು ಲೋಕಸಭೆ ವ್ಯಾಪ್ತಿಯಲ್ಲಿ ಎನ್‌ಎಚ್‌ಎಐ ಯೋಜನೆ ಕೈಗೆತ್ತಿಕೊಂಡಿದೆ. ಸುಮಾರು 96 ಕಿ.ಮೀ. ರಸ್ತೆ ಅಭಿವೃದ್ಧಿ ಆಗಲಿದೆ. ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಡಿ16ರಂದು ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸುವರು ಎಂದರು.
ತುಮಕೂರು ಗ್ರಾಮಾಂತರ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಗುಬ್ಬಿ, ತಿಪಟೂರು ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿ ನಾಲ್ಕು ಪಥದ ರಸ್ತೆ ಅಭಿವೃದ್ದಿಯಾಗಲಿದ್ದು, ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ವಾಹನಗಳ ಸಂಚಾರಿಸುವ ಈ ಮಾರ್ಗದಲ್ಲಿ ಈಗ ನಡೆಯುತ್ತಿರುವ ಭಾರಿ ಪ್ರಮಾಣದ ಅಪಘಾತಗಳಿಗೆ ಬ್ರೇಕ್ ಬೀಳಲಿದ್ದು, ಸುಗಮ ಸಂಚಾರಕ್ಕೆ ಅನುಕೂಲವಾಗುವುದು ಎಂದರು.