ತುಮಕೂರು
ಸಂವಿಧಾನದತ್ತವಾಗಿ ದಕ್ಕಿರುವ ಮತದಾನದ ಹಕ್ಕನ್ನು, ಆಸೆ, ಅಮೀಷಗಳಿಗೆ ಬಲಿಯಾಗಿ ಚಲಾಯಿಸುವುದರಿಂದ ದೇಶದ ಭವಿಷ್ಯ ಕುಂಠಿತವಾಗಲಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಎಚ್ಚರಿಕೆ ನೀಡಿದ್ದಾರೆ.
ನಗರದ ಬಟವಾಡಿಯ ಶ್ರೀಕೃಷ್ಣ ವಿದ್ಯಾಸಂಸ್ಥೆ, ಶ್ರೀಕೃಷ್ಣ ಕಾನೂನು ಕಾಲೇಜು ವತಿಯಿಂದ ರಾಷ್ಟ್ರೀಯ ಮತದಾರರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಆಸೆ,ಅಮೀಷಗಳಿಗೆ ಒಳಗಾಗಿ ಮತಚಲಾಯಿಸುವುದರಿಂದ ಆನರ್ಹರು ಸಂಸತ್ತು,ಶಾಸನಸಭೆಗಳಿಗೆ ಆಯ್ಕೆಯಾಗಿ,ದೇಶದ ಅರ್ಥಿಕ,ಸಾಮಾಜಿಕ,ಶೈಕ್ಷಣಿಕ, ರಾಜಕೀಯ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಉಂಟಾಗಲಿದೆ. ಹಾಗಾಗಿ ಮತದಾರರು ತಮ್ಮ ಮತ ಮಾರಿಕೊಳ್ಳದೆ, ಒಳ್ಳೆಯ ವ್ಯಕ್ತಿಗೆ ಮತಚಲಾಯಿಸಿ, ಈ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸಹಕರಿಸಬೇಕೆಂದು ಕರೆ ನೀಡಿದರು.
ಮತದಾನ ಎಂಬುದು ಈ ದೇಶದ ನಾಗರಿಕರಿಗೆ ಸಂವಿಧಾನದತ್ತವಾಗಿ ಲಭ್ಯವಾಗಿರುವ ಹಕ್ಕಾಗಿದೆ.ಈ ಬಗ್ಗೆ ಜನರಿಗೆ, ಅದರಲ್ಲಿಯೂ ಯುವಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಸರಕಾರ 2011 ರಿಂದ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ.ಮತದಾನವೆಂಬುದು ಒಂದು ಪವಿತ್ರ ಕಾರ್ಯ.ಈ ಕಾರ್ಯವನ್ನು ನಾವು ಸಮರ್ಪಕವಾಗಿ ಮಾಡಿದಲ್ಲಿ,ದೇಶಕ್ಕೆ ಉಜ್ವಲ ಭವಿಷ್ಯವಿದೆ.ನಮ್ಮ ಮಕ್ಕಳು ಮೂಲಭೂತ ಸೌಕರ್ಯಗಳೊಂದಿಗೆ,ಸಮಾನ ಅವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.ಹಾಗಾಗಿ 18 ವರ್ಷ ತುಂಬಿದ ಪ್ರತಿ ಯುವಕ,ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಬೇಕು,ಹಾಗೆಯೇ ಮತಗಟ್ಟೆಗೆ ಹೋಗಿ ಯಾವುದೇ ರಾಗ,ದ್ವೇಷವಿಲ್ಲದೆ ಮತಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ನ್ಯಾ.ನೂರುನ್ನಿಸಾ ಯುವಜನತೆ ಕರೆ ನೀಡಿದರು.
ಜಾಗೃತಿ ಜಾಥಾ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಆಗಮಿಸಿದ ವೇಳೆ ಜಾಥಾಕ್ಕೆ ಎಡಿಸಿ ಕೆ.ಚನ್ನಬಸಪ್ಪ,ಉಪವಿಭಾಗಾಧಿಕಾರಿ ನಟರಾಜ್,ಆಡಳಿತಾಧಿಕಾರಿ ಮೋಹನ್‍ಕುಮಾರ್ ಸ್ವಾಗತ ಕೋರಿದರು.ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಮಾತನಾಡಿ,ಮತದಾನದ ಬಗ್ಗೆ ಅರಿವು ಮೂಡಿಸುವುದು ಅತ್ಯಂತ ಮಹತ್ವದ ವಿಚಾರವಾಗಿದೆ.ಈ ನಿಟ್ಟಿನಲ್ಲಿ ಮರಿಚನ್ನಮ್ಮ ಅವರ ನೇತೃತ್ವದ ಶ್ರೀಕೃಷ್ಣ ವಿದ್ಯಾಸಂಸ್ಥೆ ಉತ್ತಮ ಕೆಲಸ ಮಾಡಿದೆ ಎಂದು ಶುಭ ಹಾರೈಸಿದರು.
ಈ ವೇಳೆ ಶ್ರೀಕೃಷ್ಣ ಏಜುಕೇಷನ್ ಸೊಸೈಟಿಯ ಅಧ್ಯಕ್ಷರಾದ ಡಾ.ಆರ್.ಲತಾ,ನಿರ್ದೇಶಕರಾದ ಶ್ರೀಮತಿ ವೀಣಾ ಆರ್, ಶ್ರೀಕೃಷ್ಣ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ವಿನೇಟ್ ವಿಮಲ, ಸಹಾಯಕ ಪ್ರಾಧ್ಯಾಪಕರಾದ ಶುಭಾ, ಉಮಾಶಂಕರ್, ರಾಜೇಶ್ವರಿ, ಮಂಜುಳ, ಸೋಮಶೇಖರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಬಟವಾಡಿಯ ಶ್ರೀಕೃಷ್ಣ ಕಾನೂನು ಕಾಲೇಜಿನಿಂದ ಹೊರಟ ಮತದಾರರ ಜಾಗೃತಿ ಜಾಥಾ ಬಿ.ಹೆಚ್.ರಸ್ತೆಯ ಮೂಲಕ ಎಸ್.ಐ.ಟಿ, ಡಾ.ಶ್ರೀಶಿವಕುಮಾರಸ್ವಾಮಿ ಸರ್ಕಲ್,ಭದ್ರಮ್ಮ ಸರ್ಕಲ್, ಟೌನ್‍ಹಾಲ್ ವೃತ್ತ, ಜಿಲ್ಲಾಧಿಕಾರಿಗಳ ಕಚೇರಿ ಬಳಿಯಿಂದ ಜಿಲ್ಲಾ ಪಂಚಾಯಿತಿ ವರೆಗೆ ಸಂಚರಿಸಿ ಮುಕ್ತಾಯಗೊಂಡಿತ್ತು.