ತುಮಕೂರು
ಪುರಾತನ ಕೆರೆ ಕಟ್ಟೆಗಳನ್ನು ಸಂರಕ್ಷಿಸಿ ಮುಂದಿನ ಯುವ ಪೀಳಿಗೆಗೆ ಉತ್ತಮ ಜಲಮೂಲಗಳನ್ನು ಸಂರಕ್ಷಿಸುವಂತೆ ತುಮಕೂರು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಿ.ಜಯಪಾಲ್ ಕರೆ ನೀಡಿದರು.
ತುಮಕೂರು ತಾಲ್ಲೂಕು ಗೂಳೂರು ಹೋಬಳಿ ಹರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಿಣ್ಣೆಪಾಳ್ಳ ಕೆರೆಯಂಗಳದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧ್ವಜಾರೋಹಣ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಹಿರಿಯರು ನಮಗಾಗಿ ನೀಡಿರುವಂತಹ ಕೆರೆಗಳು, ಗೋಕಟ್ಟೆಗಳು, ಕಲ್ಯಾಣಿಗಳು ಸೇರಿದಂತೆ ಇತರೆ ಜಲ ಮೂಲ ತಾಣಗಳನ್ನು ಇಂದಿನ ಯುವ ಪೀಳಿಗೆ ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರದ ಸೂಚನೆಯಂತೆ ಈಗಾಗಲೇ ಒತ್ತುವರಿಯಾಗಿರುವಂತಹ ಕೆರೆ – ಕಟ್ಟೆಗಳನ್ನು ಸಂರಕ್ಷಿಸಿ ಒತ್ತುವರಿ ತೆರವುಗೊಳಿಸಲಾಗುವುದು. ಸರ್ಕಾರದ ಈ ಕಾರ್ಯಕ್ಕೆ ಗ್ರಾಮಸ್ಥರು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಅಮೃತ ಸರೋವರ ಕಾಮಗಾರಿ ಸ್ಥಳದಲ್ಲಿ ಧ್ವಜಾರೋಹಣ ನೆರವೇರಿಸಿದ ಕೊಟ್ಟಿಗೆಗೊಲ್ಲಹಳ್ಳಿ ಗ್ರಾಮದ ಮಾಜಿ ಸೈನಿಕರಾದ ಕುಂಭಯ್ಯ ಅವರು ಮಾತನಾಡಿ, ನಮ್ಮೂರು ಕೆರೆಯನ್ನು ಸಂರಕ್ಷಣೆ ಮಾಡುವುದು ನಮ್ಮೆಲರ ಜವಾಬ್ದಾರಿಯಾಗಿದೆ. ಮಳೆ ಬಂದಾಗ ಬಂದಂತಹ ನೀರು ಊರಿನ ಕೆರೆ ಸೇರುತ್ತದೆ. ಈ ನೀರಿನಿಂದ ಇಡೀ ಗ್ರಾಮದ ಜನ, ಜಾನುವಾರುಗಳಿಗೆ ಅನುಕೂಲವಾಗಲಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯಡಿ 2022-23ನೇ ಸಾಲಿನಲ್ಲಿ ನಮ್ಮೂರು ಕೆರೆಯಲ್ಲಿ ಅಮೃತ ಸರೋವರವಾಗಿಸಿದ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಜಿಲ್ಲಾ ಪಂಚಾಯತ್ ಜಿಲ್ಲಾ ಐಇಸಿ ಸಂಯೋಜಕರಾದ ಹೆಚ್.ಸಿ.ಉಮೇಶ್ ಹುಲಿಕುಂಟೆ ಅವರು ಮಾತನಾಡಿ, ಮಹಾತ್ಮಗಾಂಧಿ ನರೇಗಾ ಯೋಜನೆಯಡಿ
ಗಂಡು-ಹೆಣ್ಣಿಗೆ ಸಮಾನ ಕೂಲಿ ನೀಡಲಾಗುವುದು. ಅಲ್ಲದೆ ಒಂದು ದಿನದ ಕೆಲಸಕ್ಕೆ 309/- ರೂಪಾಯಿ ಕೂಲಿ ನೀಡಲಾಗುವುದು. ಇದನ್ನು ಗ್ರಾಮೀಣ ಭಾಗದ ಜನತೆ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ನರೇಗಾ ಯೋಜನೆಯಡಿ ಇಲ್ಲಿನ ಕೆರೆಯಲ್ಲಿ ಅಭಿವೃದ್ಧಿ ಪಡಿಸಿದ ಪರಿಣಾಮ ಗ್ರಾಮದಲ್ಲಿ ಉತ್ತಮ ಆಸ್ತಿ ಸೃಜನೆಯಾಗಿದೆ. ಕೆರೆಯಲ್ಲಿ ನೀರು ಸಂಗ್ರಹಗೊಂಡ ಪರಿಣಾಮ ಗ್ರಾಮದ ರೈತರು ಹಾಗೂ ಪ್ರಾಣಿ ಪಕ್ಷಿಗಳಿಗೆ ಉತ್ತಮ ನೀರನ್ನು ನೀಡಿದಂತಾಗಿದೆ ಎಂದರು.
ಇದೇ ವೇಳೆ ಮಾತನಾಡಿದ ಹರಳೂರು ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಸ್.ಶಂಕರ್ ಅವರು ಮಾತನಾಡಿ, ದಿಣ್ಣೆಪಾಳ್ಯ ಗ್ರಾಮದ ಕೆರೆಯನ್ನು ಇಲ್ಲಿನ ಜನರ ಸಹಕಾರದಿಂದ ಅಭಿವೃದ್ಧಿ ಪಡಿಸಲಾಗಿದೆ. ಕೆರೆಯ ಏರಿಗೆ ಉತ್ತಮ ಹುಲ್ಲಿನ ಹಾಸು ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕೆರೆಯ ಪಕ್ಕದಲ್ಲಿಯೇ ಉತ್ತಮ ಉದ್ಯಾನವನ ಮಾಡಲಾಗುವುದು ಎಂದರು.
ಹರಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೆಚ್.ಕೆ.ಶಿವಪ್ರಸಾದ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಪ್ರತೀ ಗ್ರಾಮದ ಕೆರೆಗಳನ್ನು ಹಂತ ಹಂತವಾಗಿ
ಅಭಿವೃದ್ಧಿ ಪಡಿಸಿ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯಾಗಿ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ
ಹಾಗೂ ರಂಗೋಲಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಅಲ್ಲದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಯುವಕರಿಗೆ ಜೀವನೋಪಾಯಕ್ಕಾಗಿ ಎಸ್‍ಸಿ/ಎಸ್ಟಿ ಅನುದಾನದಲ್ಲಿ ವಾದ್ಯ ಸಲಕರಣೆಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಲಕ್ಷ್ಮಮ್ಮ, ಸದಸ್ಯರಾದ ಪವಿತ್ರ, ರಾಜಣ್ಣ, ಶಾರದಮ್ಮ, ರವಿಕುಮಾರ್, ನಾಗರತ್ನಮ್ಮ ಶಾಂತರಾಜು, ಬಿ.ಕೆ.ಸುರೇಶ್,ಕೃಷ್ಣಯ್ಯ ಸೇರಿದಂತೆ ಗ್ರಾಮದ ಮುಖಂಡರು ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.