ತುಮಕೂರು


ಜಿಲ್ಲೆಯಲ್ಲಿ ವಿದ್ಯಾರ್ಥಿನಿಲಯ ದುರಸ್ತಿ ಹಾಗೂ ನಿರ್ಮಾಣ, ಶೌಚಾಲಯ, ಸಮುದಾಯ ಭವನ, ಶಾಲಾ ಕಟ್ಟಡ, ವಿವೇಕ ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣ ಸೇರಿದಂತೆ ಅಪೂರ್ಣವಾಗಿರುವ ಕಾಮಗಾರಿಗಳನ್ನು ಫೆಬ್ರವರಿ 15ರೊಳಗಾಗಿ ಪೂರ್ಣಗೊಳಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ.ವಿದ್ಯಾಕುಮಾರಿ ಇಂಜಿನಿಯರುಗಳಿಗೆ ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆದ ಬಳಿಕ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಯಾವುದೇ ಕಾಮಗಾರಿಯನ್ನು ತರಾತುರಿಯಲ್ಲಿ ಪೂರ್ಣಗೊಳಿಸುವ ಭರದಲ್ಲಿ ಕಳಪೆ ಗುಣಮಟ್ಟದ ಕಾಮಗಾರಿಯನ್ನು ಕೈಗೊಂಡಲ್ಲಿ ಸಂಬಂಧಿಸಿದ ಏಜೆನ್ಸಿಗಳ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇಲಾಖಾ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸಬೇಕು. ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವ ಗುತ್ತಿಗೆದಾರರಿಗೆ ಮಾತ್ರ ಕಾರ್ಯಾದೇಶ ನೀಡಬೇಕು ಎಂದರಲ್ಲದೆ, ಸರ್ಕಾರದಿಂದ ಕಾಮಗಾರಿಗಾಗಿ ಬಿಡುಗಡೆಯಾಗಿರುವ ಅನುದಾನದ ಹಣವನ್ನು ಎಚ್ಚರಿಕೆಯಿಂದ ವೆಚ್ಚ ಮಾಡಬೇಕೆಂದು ನಿರ್ದೇಶಿಸಿದರು.
ಜಿಲ್ಲೆಗೆ ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕಾಗಿ 5.5 ಕೋಟಿ ರೂ. ಹಣ ಬಿಡುಗಡೆಯಾಗಿದ್ದು, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ತಿಳಿಸಿದರು.
ಗಂಗಾ ಕಲ್ಯಾಣ ಯೋಜನೆಯಡಿ ಕೊರೆದಿರುವ ಕೊಳವೆ ಬಾವಿಗಳಿಗೆ ವಿದ್ಯುತ್ ಸಂಪರ್ಕ ನೀಡದೆ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಿಗೆ ಕೂಡಲೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿದ್ಯುತ್ ಬಿಲ್ಲು ಪಾವತಿಯಾಗದ ಕುಡಿಯುವ ನೀರಿನ ಘಟಕ(ಆರ್.ಓ.ಪ್ಲಾಂಟ್)ಗಳಿಗೆ ಸಂಬಂಧಿಸಿದಂತೆ ಮಾನವೀಯ ದೃಷ್ಟಿಯಿಂದ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬಾರದು ಎಂದು ಬೆಸ್ಕಾಂ ಇಲಾಖೆಗೆ ಸೂಚನೆ ನೀಡಿದರು.
ನಿರ್ಮಾಣ ಕಾರ್ಯ ಪೂರ್ಣಗೊಂಡ ಕಟ್ಟಡವನ್ನು ತಮ್ಮ ವಶಕ್ಕೆ ಪಡೆದ ಬಳಿಕವೇ ಅಧಿಕಾರಿಗಳು ಬಿಲ್ಲು ಪಾವತಿಗೆ ಕ್ರಮವಹಿಸಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿ 2023ರ ವಿಧಾನಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ ಮಾಹೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಸಂಭವವಿದ್ದು, ನೀತಿ ಸಂಹಿತೆ ಜಾರಿಯಾದ ನಂತರ ಯಾವುದೇ ಕಾಮಗಾರಿಯನ್ನು ಪ್ರಾರಂಭಿಸಲು ಅವಕಾಶ ಇರುವುದಿಲ್ಲವಾದ್ದರಿಂದ ಉದ್ದೇಶಿತ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಬೇಕು ಎಂದರಲ್ಲದೆ, ಪೂರ್ಣಗೊಂಡ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಬಿಲ್ಲು ಪಾವತಿಸುವ ಮೊದಲು 3ನೇ ವ್ಯಕ್ತಿಯಿಂದ ಪರಿಶೀಲನೆಗೊಳಪಡಿಸಬೇಕು. ಉದ್ದೇಶಿತ ಕಾಮಗಾರಿಗಳಿಗೆ ಸರ್ಕಾರದಿಂದ ಈವರೆಗೂ ಹಣ ಬಿಡುಗಡೆಯಾಗದಿದ್ದಲ್ಲಿ ಸಂಬಂಧಪಟ್ಟ ಇಲಾಖೆಗಳು ಮಾಹಿತಿ ನೀಡಬೇಕೆಂದು ತಿಳಿಸಿದರು.
ಸಭೆಯಲ್ಲಿ ಕೃಷಿ, ತೋಟಗಾರಿಕೆ, ಆರೋಗ್ಯ, ಪಶುಪಾಲನೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಿಗಮಗಳು ಸೇರಿದಂತೆ ವಿವಿಧ ಇಲಾಖೆ/ನಿಗಮಗಳ ಭೌತಿಕ ಹಾಗೂ ಆರ್ಥಿಕ ಪ್ರಗತಿಯನ್ನು ಪರಿಶೀಲಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ(ಅಭಿವೃದ್ಧಿ) ಅತಿಕ್ ಪಾಷ, ಯೋಜನಾ ನಿರ್ದೇಶಕ ನರಸಿಂಹಮೂರ್ತಿ, ಮುಖ್ಯ ಯೋಜನಾಧಿಕಾರಿ ಸಣ್ಣಮಸಿಯಪ್ಪ ಹಾಗೂ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಕೆಆರ್‍ಐಡಿಎಲ್ ಇಂಜಿನಿಯರ್‍ಗಳು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 5 times, 1 visits today)