ತುಮಕೂರು
ಇತಿಹಾಸ ಪ್ರಸಿದ್ದ ಸಿದ್ದಗಂಗಾ ಮಠದ ಆರಾಧ್ಯ ದೈವ
ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ದನಗಳ ಜಾತ್ರೆ ನಡೆಯುತ್ತಿದ್ದು, ರಾಜ್ಯದ ವಿವಿಧೆಡೆಯಿಂದ ರೈತರು ಜಾನುವಾರುಗಳೊಂದಿಗೆ ಸಿದ್ದಗಂಗೆಗೆ ಬಂದು ಭರ್ಜರಿ ವ್ಯಾಪಾರದಲ್ಲಿ ತೊಡಗಿದ್ದಾರೆ.
ರಾಜ್ಯದಲ್ಲಿ ಜಾನುವಾರುಗಳಿಗೆ ಕಾಣಿಸಿಕೊಂಡಿರುವ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ಜಾನುವಾರು ಜಾತ್ರೆ ನಡೆಸದಂತೆ ಸರ್ಕಾರ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀಮಠದ ವತಿಯಿಂದ ಈ ಬಾರಿ ಜಾನುವಾರು ಜಾತ್ರೆಯಲ್ಲಿ ರದ್ದುಪಡಿಸಲಾಗಿತ್ತು. ಈ ಸಂಬಂಧ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರು ಸಹ ಮಠದ ವತಿಯಿಂದ ಜಾನುವಾರು ಜಾತ್ರೆ ನಡೆಯುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು. ಆದರೂ ಸಹ ಸ್ವತಃ ರೈತರೇ ರಾಸುಗಳೊಂದಿಗೆ ಸಿದ್ದಗಂಗೆಗೆ ಬಂದು ರಾಸುಗಳ ಮಾರಾಟ ಮತ್ತು ಖರೀದಿಯಲ್ಲಿ ತೊಡಗಿದ್ದಾರೆ.
ಈ ಬಾರಿ ರಾಸುಗಳ ಜಾತ್ರೆಗೆ ಸುಮಾರು 80 ಸಾವಿರ, 1 ಲಕ್ಷ ರೂ.ಗಳಿಂದ ಹಿಡಿದು 7 ರಿಂದ 8 ಲಕ್ಷ ರೂ. ಬೆಲೆಯ ರಾಸುಗಳು ಬಂದಿದ್ದು, ಎಂದಿನಂತೆ ಜಾನುವಾರುಗಳ ಖರೀದಿ ಮತ್ತು ಮಾರಾಟ ನಡೆಯುತ್ತಿದೆ ಎಂದು ರೈತ ಹಾಗೂ ಚಿಕ್ಕಣ್ಣಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾದ ಪಾಪಣ್ಣ ತಿಳಿಸಿದ್ದಾರೆ.
ಈ ಬಾರಿ ರಾಸುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ದನಗಳ ಜಾತ್ರೆಯನ್ನು ರದ್ದುಗೊಳಿಸಿ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಬುದ್ದಿಯವರನ್ನು ಕೇಳಿದಾಗ ಅವರು ಸಹ ಗಂಟು ರೋಗದಿಂದ ಜಾತ್ರೆ ನಡೆಯುವುದಿಲ್ಲ ಎಂದು ತಿಳಿಸಿದ್ದರು. ಆದರೂ ರೈತರುಗಳೇ ಖುದ್ದು ಜಾತ್ರೆಗೆ ಜಾನುವಾರು ಕರೆ ತಂದಿರುವುದರಿಂದ ಎಂದಿನಂತೆ ದನಗಳ ವ್ಯಾಪಾರ ನಡೆಯುತ್ತಿದೆ ಎಂದು ಅವರು ಹೇಳಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ರೈತರು ಜಾನುವಾರುಗಳನ್ನು ಮಾರಲು ಮತ್ತು ಖರೀದಿ ಮಾಡಲು ಬಂದಿದ್ದಾರೆ.
ರಾಸುಗಳಿಗೆ ಅಗತ್ಯ ನೀರಿನ ವ್ಯವಸ್ಥೆಯು ಲಭ್ಯವಾಗಿದೆ. ಯಾವುದೇ ರೀತಿಯ ತೊಂದರೆಯಿಲ್ಲದಂತೆ ದನಗಳ ಜಾತ್ರೆ ನಡೆಯುತ್ತಿದೆ ಎಂದು ಅವರು ಹೇಳಿದರು.